ADVERTISEMENT

ವಿಜಯೇಂದ್ರ–ಯೋಗೇಶ್ವರ್‌ ಪೈಪೋಟಿ; ಹಳೇ ಮೈಸೂರು ಭಾಗದ ಉಸ್ತುವಾರಿಗಾಗಿ ಇಬ್ಬರ ಯತ್ನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 20:54 IST
Last Updated 24 ಆಗಸ್ಟ್ 2020, 20:54 IST
 ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್
ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್    

ಬೆಂಗಳೂರು: ಹಳೇ ಮೈಸೂರು ಭಾಗದ ಸಂಘಟನೆಯ ಉಸ್ತುವಾರಿಗಾಗಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್ ಅವರ ಮಧ್ಯೆ ಪೈಪೋಟಿ ಆರಂಭವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ವೈಯಕ್ತಿಕ ಜಿದ್ದಾಜಿದ್ದಿ ಇಟ್ಟುಕೊಂಡಿರುವ ಯೋಗೇಶ್ವರ್, ಒಕ್ಕಲಿಗರ ಪ್ರಾಬಲ್ಯದ ಕಾರಣ ಮುಂದಿಟ್ಟು, ಉಸ್ತುವಾರಿಯ ಬೇಡಿಕೆ ಮಂಡಿಸಿದ್ದಾರೆ. ಇದರಲ್ಲಿ ಯಶ ಕಾಣಬೇಕಾದರೆ, ಮಂತ್ರಿ ಸ್ಥಾನ ಕೊಡಿ ಎಂಬ ವಾದವನ್ನು ಅವರು ಮುಂದಿಟ್ಟಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದ ಯೋಗೇಶ್ವರ್, ಈ ಪ್ರಸ್ತಾಪವನ್ನೂ ಮುಂದಿಟ್ಟು ತಮ್ಮ ಆಲೋಚನೆ ಹಂಚಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ADVERTISEMENT

ಬಿ.ವೈ.ವಿಜಯೇಂದ್ರ ಪ್ರಸ್ತಾಪ: ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಈ ಪ್ರದೇಶದ ಉಸ್ತುವಾರಿ ವಹಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿದ್ದಾರೆ.

‘ಕೆ.ಆರ್‌.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಈ ಭಾಗದಲ್ಲಿ ‘ಕಮಲ’ವನ್ನು ಗಟ್ಟಿಯಾಗಿ ಬೇರೂರಿಸುವ ಒಳ ದಾರಿಗಳು ಗೋಚರಿಸಿವೆ. ಉಪಚುನಾವಣೆ ಜವಾಬ್ದಾರಿ ನಿರ್ವಹಿಸಿದ ವೇಳೆ ಇದು ಅನುಭವಕ್ಕೆ ಬಂದಿದೆ. ಸಂಘಟನೆಯ ಜವಾಬ್ದಾರಿ ವಹಿಸಿದರೆ ಪಕ್ಷವನ್ನು ಬಲಿಷ್ಠಗೊಳಿಸಲು ಸರ್ವಥಾ ಶ್ರಮಿಸುತ್ತೇನೆ ಎಂದು ವಿಜಯೇಂದ್ರ ಅವರು ವರಿಷ್ಠರ ಮುಂದೆ ತಮ್ಮ ವಾದ ಮಂಡಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ವಿಧಾನಸಭಾ ಚುನಾವಣೆಯಲ್ಲಿ ವರುಣಾದಲ್ಲಿ ಸ್ಪರ್ಧಿಸಲು ವಿಜಯೇಂದ್ರ ಬಯಸಿದ್ದರು. ಪಕ್ಷ ಟಿಕೆಟ್‌ ನಿರಾಕರಿಸಿತ್ತು. ಆ ಬಳಿಕ ಹಳೆ ಮೈಸೂರು ಭಾಗದಲ್ಲಿ ಓಡಾಡುತ್ತಿರುವ ವಿಜಯೇಂದ್ರ, ಈಗ ಉಸ್ತುವಾರಿ ಹೊತ್ತುಕೊಳ್ಳುವ ಇರಾದೆ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.