ADVERTISEMENT

ಗೊಂದಲದಲ್ಲಿ ಲಕ್ಷಾಂತರ ಅಭ್ಯರ್ಥಿಗಳು

ಟಿಇಟಿ, ಕೆ–ಸೆಟ್‌,ಕೆಎಎಸ್ ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆ ಇರುವ ದಿನ ಲಾಕ್‌ಡೌನ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 19:30 IST
Last Updated 30 ಜೂನ್ 2020, 19:30 IST

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯಸರ್ಕಾರವು ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. ಆದರೆ, ಜುಲೈ ಮತ್ತು ಆಗಸ್ಟ್‌ ತಿಂಗಳ ಕೆಲವು ಭಾನುವಾರ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳು ನಿಗದಿಯಾಗಿವೆ. ಲಾಕ್‌ಡೌನ್‌ ಇರುವುದರಿಂದ ಪರೀಕ್ಷೆ ನಡೆಯುವುದೋ, ಇಲ್ಲವೋ ಎಂಬ ಗೊಂದಲದಲ್ಲಿ ಅಭ್ಯರ್ಥಿಗಳಿದ್ದಾರೆ.

‘ಜುಲೈ 7ಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರೀಕ್ಷೆ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಜುಲೈ 12ರಂದು ನಿಗದಿಯಾಗಿದೆ. ಅದೇ, ರೀತಿ ಮೈಸೂರು ವಿಶ್ವವಿದ್ಯಾಲಯವು ಜುಲೈ 19ಕ್ಕೆ ಕೆ–ಸೆಟ್‌ ಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು. ಕರ್ನಾಟಕ ಲೋಕಸೇವಾ ಆಯೋಗವು ಆಗಸ್ಟ್‌ 2ಕ್ಕೆ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗೆ ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಆದರೆ, ಲಾಕ್‌ಡೌನ್‌ ಘೋಷಿಸಿರುವುದರಿಂದ ಪರೀಕ್ಷೆಗಳು ನಡೆಸುತ್ತಾರೋ, ಇಲ್ಲವೋ ತಿಳಿಯುತ್ತಿಲ್ಲ’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು.

‘ಪರೀಕ್ಷೆಗಳನ್ನು ಮುಂದೂಡಬಹುದು ಎಂಬ ನಿರೀಕ್ಷೆ ಇದ್ದು, ಓದಲು ಹೆಚ್ಚು ಸಮಯ ಸಿಗಲಿದೆ. ಯಾವುದಕ್ಕೂ ಸರ್ಕಾರ ಬೇಗನೇ ನಿರ್ಧಾರ ಪ್ರಕಟಿಸಿದರೆ ಅನುಕೂಲವಾಗುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ಜುಲೈ 19ಕ್ಕೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಈಗ ಪರೀಕ್ಷೆ ನಡೆಸುವುದು, ಬಿಡುವುದು ಸರ್ಕಾರದ ತೀರ್ಮಾನವನ್ನು ಅವಲಂಬಿಸಿದೆ. ಈವರೆಗೆ ನಮಗೆ ಯಾವುದೇ ಸೂಚನೆ ಬಂದಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ್‌ಕುಮಾರ್‌ ತಿಳಿಸಿದರು.

‘ಕೆಎಎಸ್ ಪೂರ್ವಭಾವಿ ಪರೀಕ್ಷೆ ಅಲ್ಲದೆ, ಭಾನುವಾರಗಳಂದು ಬೇರೆ ಬೇರೆ ಪರೀಕ್ಷೆಗಳು ಕೂಡ ನಿಗದಿಯಾಗಿವೆ. ಆದರೆ, ಲಾಕ್‌ಡೌನ್‌ ಆದೇಶ ಸೋಮವಾರ ನಮಗೆ ಸಿಕ್ಕಿದೆ. ಶೀಘ್ರದಲ್ಲಿಯೇ ಈ ಕುರಿತು ಪ್ರಕಟಣೆ ಹೊರಡಿಸುತ್ತೇವೆ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಟಿಇಟಿ ಕುರಿತು ಮಾಹಿತಿ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರನ್ನು ಸಂಪರ್ಕಿಸಲಾಯಿತಾದರೂ, ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.