ADVERTISEMENT

ಹೈಕೋರ್ಟ್‌ ಸುದ್ದಿಗಳು | ತರುಣಿ ಸಾವಿಗೆ ಕುಮ್ಮಕ್ಕು: 5 ವರ್ಷ ಜೈಲು ಕಾಯಂ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:56 IST
Last Updated 23 ಮೇ 2025, 15:56 IST
<div class="paragraphs"><p>ಹೈಕೋರ್ಟ್‌</p></div>

ಹೈಕೋರ್ಟ್‌

   

ಬೆಂಗಳೂರು: ತರುಣಿಯನ್ನು ಗರ್ಭಿಣಿಯಾಗಿಸಿ ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ವಿಷಯುಕ್ತ ಮಾತ್ರೆಗಳನ್ನು ನೀಡಿ ಅವಳ ಸಾವಿಗೆ ಕಾರಣವಾದ ಅಪರಾಧಿಯೊಬ್ಬನ ಐದು ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

‘ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ವಿಚಾರಣಾ ನ್ಯಾಯಾಲಯ ನನಗೆ ವಿಧಿಸಿರುವ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬಿದಲಪುರದ ಯುವಕ ಮುರಳಿ (25) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ADVERTISEMENT

‘ಸಂತ್ರಸ್ತೆ ಸಾಯುವುದಕ್ಕೂ ಮುನ್ನ ನೀಡಿರುವ ಮರಣ ಪೂರ್ವ ಹೇಳಿಕೆಯಲ್ಲಿ ಅಪರಾಧಿಯ ಹೆಸರನ್ನು ತಿಳಿಸಿದ್ದಾರೆ. ಆಕೆ ಸಾಯುವ ಮುನ್ನ ಅವಳ ಹೊಟ್ಟೆಯಲ್ಲಿ ಆರೂವರೆ ತಿಂಗಳ ಭ್ರೂಣ ಇರುವುದು ವೈದ್ಯಕೀಯ ವರದಿಯಲ್ಲಿ ಸಾಬೀತಾಗಿದೆ. ಈ ಭ್ರೂಣವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲಿಲ್ಲ ಎಂಬ ಕಾರಣದಿಂದ ಮೃತಳು ಗರ್ಭಧರಿಸಲು ಆರೋಪಿ ಕಾರಣ ಅಲ್ಲ ಎಂಬ ಮೇಲ್ಮನವಿದಾರನ ವಾದವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ಅಪರಾಧಿಗೆ ವಿಧಿಸಿರುವ ಶಿಕ್ಷೆಯ ಆದೇಶದಲ್ಲಿ ಯಾವುದೇ ದೋಷಗಳಿಲ್ಲ. ಹೀಗಾಗಿ, ದೇವನಹಳ್ಳಿಯ ತ್ವರಿತಗತಿಯ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ಕ್ರಿಮಿನಲ್ ಮೇಲ್ಮನವಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಲಂಚ: 4 ವರ್ಷ ಜೈಲು ಶಿಕ್ಷೆ ಕಾಯಂ

ಬಾಗಲಗುಂಟೆ ಪೊಲೀಸ್ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಎಂ.ಕೆ.ಮಂಜಣ್ಣ ವಿರುದ್ಧದ ₹10 ಸಾವಿರ ಲಂಚ ಪಡೆದ ಅಪರಾಧ ಸಾಬೀತಾದ ಕಾರಣ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 4 ವರ್ಷಗಳ ಶಿಕ್ಷೆ ಮತ್ತು ₹1 ಲಕ್ಷ ದಂಡದ ಆದೇಶವನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

‘ವಿಶೇಷ ನ್ಯಾಯಾಲಯ ನನಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸಬೇಕು’ ಎಂದು ಕೋರಿ ಎಂ.ಕೆ.ಮಂಜಣ್ಣ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಭ್ರಷ್ಟಾಚಾರ ಆರೋಪ ಹೊತ್ತ ಪ್ರಕರಣಗಳಲ್ಲಿ ಮುಖ್ಯವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಮತ್ತು ಹಣ ಪಡೆದಿರುವುದು ಸಾಬೀತಾಗಬೇಕು. ಇದರಲ್ಲಿ ಅವೆರಡೂ ದೃಢಪಟ್ಟಿವೆ. ಹೀಗಾಗಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಕಾಯಂಗೊಳಿಸಲಾಗುತ್ತಿದೆ’ ಎಂದು ನ್ಯಾಯಪೀಠ ವಿವರಿಸಿದೆ.

ಪ್ರಕರಣ: ಕ್ರಿಮಿನಲ್‌ ಆರೋಪದ ಪ್ರಕರಣವೊಂದನ್ನು ಮುಕ್ತಾಯಗೊಳಿಸಲು ಮಂಜಣ್ಣ 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು. ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಆರೋಪಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13(1)ಡಿ ಮತ್ತು ಕಲಂ 13(2) ಅಡಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಿತ್ತು. 

ಶಾಸಕ ಹರೀಶ್‌ ಪೂಂಜಾ ವಿರುದ್ಧದ ಪ್ರಕರಣಕ್ಕೆ ತಡೆ

‘ಕೋಮು ದ್ವೇಷ ಹರಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್‌ ಪೂಂಜಾ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ಎಫ್‌ಐಆರ್‌ ಮತ್ತು ಮುಂದಿನ ನ್ಯಾಯಿಕ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಎಫ್‌ಐಆರ್‌ ರದ್ದು ಕೋರಿ ಹರೀಶ್‌ ಪೂಂಜಾ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ರಜಾಕಾಲದ ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿ ವಿಚಾರಣೆಯನ್ನು ಜೂನ್‌ 18ಕ್ಕೆ ಮುಂದೂಡಿದೆ.

ಪ್ರಕರಣವೇನು?: ‘ಇದೇ 3ರಂದು ತೆಕ್ಕಾರುವಿನ ಭಟ್ರಬೈಲಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡಿದ್ದ ಹರೀಶ್‌ ಪೂಂಜಾ ಅವರು ತುಳು ಭಾಷೆಯಲ್ಲಿ ಮಾತನಾಡುತ್ತಾ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಹರಡಿದ್ದಾರೆ. ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಲಾಗಿದೆ’ ಎಂದು ಆರೋಪಿಸಿ ತೆಕ್ಕಾರಿನ ಎಸ್‌.ಬಿ.ಇಬ್ರಾಹಿಂ, ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಮೇ 4ರಂದು ದೂರು ನೀಡಿದ್ದರು.

ದೂರನ್ನು ಆಧರಿಸಿ ಹರೀಶ್‌ ಪೂಂಜಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ಸಿಒಪಿ: 31ರವರೆಗೆ ಕೊನೆಯ ಅವಕಾಶ

ರಾಜ್ಯದಲ್ಲಿ 1961ರಿಂದ 2010ರವರೆಗೆ ಕಾನೂನು ಪದವಿ ಪಡೆದವರಿಗೆ ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ (ಸಿಒಪಿ) ಪಡೆಯಲು ಅರ್ಜಿ ಸಲ್ಲಿಸುವುದಕ್ಕಾಗಿ ಇದೇ 31ರವರೆಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕೊನೆಯ ಅವಕಾಶ ಕಲ್ಪಿಸಿದೆ. ‘1961ರಿಂದ 2010ರ ಜೂನ್ 12ರೊಳಗೆ ಕಾನೂನು ಪದವಿ ಪಡೆದಿರುವ ಆದರೆ ಸಿಒಪಿ ಪಡೆಯದೇ ಇರುವವರು ₹300 ಸಾಮಾನ್ಯ ಶುಲ್ಕ ಮತ್ತು ₹1200 ವಿಳಂಬ ಶುಲ್ಕ ಸೇರಿ ಒಟ್ಟು ₹1500 ಪಾವತಿಸಿ ಭೌತಿಕವಾಗಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಅಂಚೆ ಮುಖಾಂತರ ಅರ್ಜಿ ಸಲ್ಲಿಸುವಂತಿಲ್ಲ’ ಎಂದು ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌.ಮಿಟ್ಟಲಕೋಡ ತಿಳಿಸಿದ್ದಾರೆ. ಇದೇ ವೇಳೆ 2010ರ ಜೂನ್ 12ರ ಬಳಿಕ ಅಖಿಲ ಭಾರತ ವಕೀಲರ ಪರಿಷತ್‌ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗಿ ನೋಂದಣಿ ಮಾಡಿಕೊಂಡಿರುವವರು ಘೋಷಣಾ ಫಾರಂ ಅನ್ನು ಸಲ್ಲಿಸಿರದಿದ್ದರೆ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.