ADVERTISEMENT

ಬೆಂಗಳೂರು– ಮೈಸೂರು ಹೆದ್ದಾರಿ ಅಕ್ಕಪಕ್ಕ ಅಭಿವೃದ್ಧಿಗೆ ಕಾಂಗ್ರೆಸ್‌ ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 21:26 IST
Last Updated 5 ಜನವರಿ 2023, 21:26 IST
ಬೆಂಗಳೂರು– ಮೈಸೂರು ಹೆದ್ದಾರಿ
ಬೆಂಗಳೂರು– ಮೈಸೂರು ಹೆದ್ದಾರಿ   

ಬೆಂಗಳೂರು: ‘ಬೆಂಗಳೂರು– ಮೈಸೂರು ರಾಷ್ಟೀಯ ಹೆದ್ದಾರಿ 275ರಲ್ಲಿ ಎರಡೂ ಬದಿಯ ಅವೈಜ್ಞಾನಿಕ ಸರ್ವಿಸ್ ರಸ್ತೆಗಳನ್ನು ಸರಿಪಡಿಸಬೇಕು. ಅಂಡರ್‌ಪಾಸ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಸಂಸದ ಡಿ.ಕೆ. ಸುರೇಶ್‌ ಮನವಿ ಸಲ್ಲಿಸಿದರು.

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ ಸುರೇಶ್‌, ತಮ್ಮ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

‘ಬೆಂಗಳೂರು–ದಿಂಡಗಲ್ ಹೆದ್ದಾರಿ 209ರ ವ್ಯಾಪ್ತಿಯಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಬೇಕು. ಹೆದ್ದಾರಿ ಹಾದುಹೋಗುವ ಕನಕಪುರ ಬೈಪಾಸ್, ಕನಕಪುರ ಬೈಪಾಸ್‌ನ ಎಪಿಎಂಸಿ ಯಾರ್ಡ್‌ನಿಂದ ಸಮೀಪದ ಮುಖ್ಯರಸ್ತೆವರೆಗೆ, ಕನಕಪುರ ಬೈಪಾಸ್‌ನಿಂದ ಹೊರನಡೆಯುವ ಕಡೆ ಬಲಭಾಗದಲ್ಲಿ ಸರ್ವಿಸ್ ರಸ್ತೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಹಾರೋಹಳ್ಳಿ ಬೈಪಾಸ್‌ಗಳಲ್ಲಿ ವಾಹನ ಸಂಚಾರಕ್ಕೆ ಅಂಡರ್ ಪಾಸ್ ನಿರ್ಮಿಸಬೇಕು. ಕನಕಪುರ ಪಟ್ಟಣ ಅಭಿವೃದ್ಧಿ, ಅರ್ಕಾವತಿ ನದಿಗೆ ಬಲಭಾಗದಲ್ಲಿ ಪರ್ಯಾಯ ಸೇತುವೆ ನಿರ್ಮಾಣ, ಶನಿಮಹಾತ್ಮ ದೇವಾಲಯ, ರವಿಶಂಕರ್ ಗುರೂಜಿ ಆಶ್ರಮ, ಕಗ್ಗಲಿಪುರ ಸರ್ಕಾರಿ ಶಾಲಾ ವಲಯ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಜೈನ್ ವಿ.ವಿ, ಸಾತನೂರು ಜಂಕ್ಷನ್, ಜಕ್ಕೇಗೌಡನದೊಡ್ಡಿ ವ್ಯಾಪ್ತಿ
ಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು’.

ADVERTISEMENT

‘ಬಿಡದಿಯಿಂದ ಅತ್ತಿಬೆಲೆ, ರಾ.ಹೆ.44ರ ಹಾರೋಹಳ್ಳಿ, ಜಿಗಣಿ, ಆನೇಕಲ್ ಮಾರ್ಗವಾಗಿ ಸಾಗುವ ಬೆಂಗಳೂರು–ಚೆನ್ನೈ ಹೆದ್ದಾರಿಯಲ್ಲಿ ಜಂಕ್ಷನ್‌ಗಳ ಅಭಿವೃದ್ಧಿ ಮಾಡಬೇಕು. ಚನ್ನಪಟ್ಟಣದಲ್ಲಿ ಕರಕುಶಲ ಕಲಾಗ್ರಾಮ ನಿರ್ಮಿಸಬೇಕು’ ಎಂದೂ ಕೋರಿದ್ದಾರೆ.

ಮನವಿ: ‘ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಜನರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಬಳಸಲು ಅವಕಾಶ ಮಾಡಿಕೊಡಬೇಕು. ಈ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಈ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು’ ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.