ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂಬುದಕ್ಕೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಫಲಿತಾಂಶಗಳೇ ಸಾಕ್ಷಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪರಿಶಿಷ್ಟ ವಿಭಾಗದ ರಾಜ್ಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯದಲ್ಲಿ ಉತ್ತಮ ಸಂಘಟನೆ ಮಾಡಿದ್ದಾರೆ. ಇದರ ಪ್ರತಿಫಲವಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಿದ್ದು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿದೆ. ಪರಿಶಿಷ್ಟ ವಿಭಾಗದ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುವಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗ ಯಶಸ್ವಿಯಾಗಿದೆ’ ಎಂದರು.
ಅಖಿಲ ಭಾರತ ಪರಿಶಿಷ್ಟ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಶಿವಾಜಿ ರಾವ್ ಮೋಗೆ ಮಾತನಾಡಿ, ‘ವಿಧಾನಸಭೆ, ಲೋಕಸಭೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ ಪಕ್ಷ ಕಾಂಗ್ರೆಸ್. ಹೀಗಾಗಿ ಈ ಸಮುದಾಯ ಪಕ್ಷದ ಜೊತೆಗಿದೆ’ ಎಂದರು.
ಪರಿಶಿಷ್ಟ ವಿಭಾಗ ರಾಜ್ಯ ಘಟಕದ ಅಧ್ಯಕ್ಷ ಎಂ. ವಿಜಯ ನಾಯಕ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಪರಿಶಿಷ್ಟ ಪಂಗಡದ ಸಮುದಾಯ ಶ್ರೇಯೋಭಿವೃದ್ದಿಗೆ ಅನುಕೂಲವಾಗಿದೆ’ ಎಂದರು.
‘ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಹಾಗೂ ನಿಗಮ– ಮಂಡಳಿ ನೇಮಕಾತಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
ಮಾಜಿ ಶಾಸಕ ಕೃಷ್ಣಮೂರ್ತಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಆರ್. ಧರ್ಮಸೇನ, ರಾಷ್ಟ್ರೀಯ ಮುಖಂಡರಾದ ಜಿ.ಆರ್. ದಿನೇಶ್, ಇಂಟಕ್ ಅಧ್ಯಕ್ಷ ಲಕ್ಷ್ಮಿವೆಂಕಟೇಶ್, ಸೇವಾದಳ ಅಧ್ಯಕ್ಷ ರಾಮಚಂದ್ರ, ಶೌಕತ್ ಅಲಿ, ಪರಿಶಿಷ್ಟ ಪಂಗಡ ವಿಭಾಗದ ಮುಖಂಡರು, ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.