ADVERTISEMENT

ಹಗರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್‌ ಹೋರಾಟ: ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 11:47 IST
Last Updated 13 ಜೂನ್ 2022, 11:47 IST
ಸಿ.ಎನ್‌.ಅಶ್ವತ್ಥನಾರಾಯಣ
ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ‘ನ್ಯಾಷನಲ್ ಹೆರಾಲ್ಡ್‌’ ಹಗರಣದಿಂದ ನುಣುಚಿಕೊಳ್ಳಲು ಕಾಂಗ್ರೆಸ್‌ ಪಕ್ಷ ಜಾರಿ ನಿರ್ದೇಶನಾಲಯದ(ಇ.ಡಿ) ವಿರುದ್ಧ ಹೋರಾಟ ಆರಂಭಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ।ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ.ಡಿ ತನಿಖೆಗೆ ಕಾಂಗ್ರೆಸ್‌ ಪಕ್ಷ ಸಹಕರಿಸಬೇಕು. ತಾವು ಪ್ರಶ್ನಾತೀತರು, ಭ್ರಷ್ಟಾಚಾರದಲ್ಲಿ ತಮ್ಮನ್ನು ವಿಚಾರಣೆಗೆ ಕರೆಯಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

‘ನಾವು ಭ್ರಷ್ಟಾಚಾರದ ವಿರುದ್ಧ ಇದ್ದೇವೆ. ಯಾವುದೇ ಪಕ್ಷದ ಭ್ರಷ್ಟಾಚಾರಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಅದೇ ಪ್ರಕಾರ ಅವರು ನಡೆದುಕೊಳ್ಳುತ್ತಿದ್ದಾರೆ. 60 ವರ್ಷ ಆಡಳಿತ ನಡೆಸಿದವರಿಗೆ ಈ ದೇಶದ ಕಾನೂನು ಗೊತ್ತಿಲ್ಲವೇ? ಪ್ರತಿಭಟನೆ ನಡೆಸುವವರು ಮುಂದೆ ತಿಹಾರ್‌ ಜೈಲು ಸೇರಬೇಕಾಗುತ್ತದೆ. ಇ.ಡಿ.ಸ್ವಾಯತ್ತತೆ ಹೊಂದಿದ ಸಂಸ್ಥೆ.ಅದಕ್ಕೆ ಬೆದರಿಕೆ ಹಾಕುವುದು ಎಷ್ಟು ಸರಿ’ ಎಂದೂ ಅವರು ಪ್ರಶ್ನಿಸಿದರು.

ADVERTISEMENT

ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ ಪಕ್ಷ, ಅವರಲ್ಲಿ ಪ್ರಾಮಾಣಿಕತೆ, ನೈತಿಕತೆ, ರಾಷ್ಟ್ರೀಯತೆ ಮತ್ತು ದೇಶ ಪ್ರೇಮ ಇಲ್ಲ. ಸಮನ್ಸ್‌ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ಮಾಡಿ ಏನು ಸಂದೇಶ ನೀಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಿದರೂ ಪ್ರಶ್ನಿಸಬಾರದು, ಕಾನೂನಿಗಿಂತ ಅತೀತರು ಎಂಬ ಧೋರಣೆ ಸರಿಯೇ ಎಂದು ಅಶ್ವತ್ಥನಾರಾಯಣ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.