ADVERTISEMENT

ಜೆಡಿಎಸ್‌ ಉಪಸಭಾಪತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ?

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 20:35 IST
Last Updated 9 ಅಕ್ಟೋಬರ್ 2019, 20:35 IST
ಎನ್.ಧರ್ಮೇಗೌಡ
ಎನ್.ಧರ್ಮೇಗೌಡ   

ಬೆಂಗಳೂರು: ಜೆಡಿಎಸ್ ಜತೆ ಮೈತ್ರಿ ಕಡಿತಗೊಂಡ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎನ್.ಧರ್ಮೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಪರಿಷತ್ ಉಪಸಭಾಪತಿಯನ್ನು ಕೆಳಗಿಳಿಸಲು ಒಮ್ಮತಕ್ಕೆ ಬರಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಮೈತ್ರಿಯಿಂದಾಗಿಪರಿಷತ್ ಉಪಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಮೈತ್ರಿ ಸರ್ಕಾರ ಪತನದನ ನಂತರ ಎರಡೂ ಪಕ್ಷಗಳು ಅಂತರ ಕಾಯ್ದುಕೊಂಡಿವೆ. ಹಾಗಾಗಿ ಅವಿಶ್ವಾಸ ನಿರ್ಣಯ ಮಂಡಿಸಿ, ಆ ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಳ್ಳಲು ಮುಂದಾಗಿದೆ.

ADVERTISEMENT

‌ಸದನದಲ್ಲಿ ಹೋರಾಟ:ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡದಿರುವುದು ಹಾಗೂ ಕೇಂದ್ರ ಸರ್ಕಾರ ಸಹ ಸರಿಯಾಗಿ ಪರಿಹಾರ ಬಿಡುಗಡೆ ಮಾಡದಿರುವುದು, ಬರ ನಿರ್ವಹಣೆಯಲ್ಲಿ ಆಗಿರುವ ಹಿನ್ನಡೆಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಸದನದಲ್ಲಿ ಹೋರಾಟ ರೂಪಿಸುವ ಬಗ್ಗೆಶಾಸಕರು ಚರ್ಚಿಸಿದ್ದಾರೆ.

ಸರ್ಕಾರದ ಮೇಲೆ ಒಮ್ಮೆಲೆ ಮುಗಿಬೀಳುವುದು, ಕೇಂದ್ರದಿಂದ ನೆರೆ ಪರಿಹಾರ ತರುವಲ್ಲಿ ವಿಫಲ, ರಾಜ್ಯ ಸರ್ಕಾರವೂ ಪರಿಹಾರವನ್ನು ಸಮರ್ಪಕವಾಗಿ ತಲುಪಿಸದಿರುವುದು, ಕೊಟ್ಟಿರುವ ₹10 ಸಾವಿರ ಪರಿಹಾರವೂ ಫಲಾನುಭವಿಗಳಿಗೆ ತಲುಪದಿರುವ ಬಗ್ಗೆ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ.

ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರು ಆಯ್ಕೆ ಆಗಿದ್ದರೂ ಒಬ್ಬರೂ ಬಾಯಿ ಬಿಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಂಡರೆ ಭಯಪಟ್ಟು ದೂರು ನಿಲ್ಲುತ್ತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಯಾರೊಬ್ಬರೂ ಪ್ರಧಾನಿ ಬಳಿಗೆ ಹೋಗಿ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿಲ್ಲ. ಒಟ್ಟಾರೆ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಶಾಸಕರು ಸಜ್ಜಾಗಿದ್ದಾರೆ.

ಜೆಡಿಎಸ್‌ನವರು ನಮ್ಮ ಹೋರಾಟಕ್ಕೆ ಬೆಂಬಲ ನೀಡಬಹುದು. ಒಂದು ವೇಳೆ ಅವರಿಂದ ಅಗತ್ಯ ಸಹಕಾರ ಸಿಗದಿದ್ದರೆ ಒಂಟಿಯಾಗಿ ಸದನದಲ್ಲಿ ಹೋರಾಟ ನಡೆಸುವಂತೆ ಶಾಸಕರಿಗೆ ಮುಖಂಡರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ, ಎಚ್.ಕೆ.ಪಾಟೀಲ ಇತರರು ಸಲಹೆ ನೀಡಿದ್ದಾರೆ.

ವಿದೇಶ ಪ್ರವಾಸದಲ್ಲಿ ಇರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.