ADVERTISEMENT

ಜ.19ರಂದು ಕೆಪಿಸಿಸಿ ಚುನಾವಣಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 15:23 IST
Last Updated 18 ಜನವರಿ 2024, 15:23 IST
<div class="paragraphs"><p>ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ </p></div>

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ

   

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ, ಕಾರ್ಯತಂತ್ರ, ಸಚಿವರ ಸ್ಪರ್ಧೆ, ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಕೆಪಿಸಿಸಿ ಚುನಾವಣಾ ಸಮಿತಿಯ ಮಹತ್ವದ ಸಭೆ ಶುಕ್ರವಾರ (ಜ. 19) ನಡೆಯಲಿದೆ.

ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌಧರಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಮಿತಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುವಂತೆ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕೆಲವು ಸಚಿವರಿಗೆ ಕಾಂಗ್ರೆಸ್‌ ವರಿಷ್ಠರು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಸ್ಪರ್ಧಿಸಲು ಸಚಿವರು ಉತ್ಸುಕರಾಗಿಲ್ಲ ಎನ್ನಲಾಗಿದೆ. ಸಚಿವರ ಸ್ಪರ್ಧೆಯ ಕುರಿತ ಗೊಂದಲಕ್ಕೆ ಈ ಸಭೆಯಲ್ಲಿ ತೆರೆ ಬೀಳುವ ಸಾಧ್ಯತೆಯಿದೆ.

‘ಬಿಜೆಪಿ– ಜೆಡಿಎಸ್‌ ಮೈತ್ರಿಯಿಂದಾಗಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಎದುರಾಗಬಹುದು. ಮೈತ್ರಿಕೂಟದ ಅಭ್ಯರ್ಥಿಯನ್ನು ಎದುರಿಸಲು ಸಚಿವರನ್ನು ಕಣಕ್ಕಿಸುವುದು ಸೂಕ್ತ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿದೆ. ಎಲ್ಲ ಸಚಿವರಿಗೆ ಈಗಾಗಲೇ ಕ್ಷೇತ್ರಗಳ ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಕ್ಷೇತ್ರಗಳ ಮುಖಂಡರ ಜೊತೆ ಚರ್ಚಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿಗೆ ನೀಡಿದ್ದಾರೆ. ಈ ಪಟ್ಟಿಯ ಬಗ್ಗೆ ‌ಚರ್ಚಿಸಿ, ಅಭ್ಯರ್ಥಿ ಆಯ್ಕೆ ನಿಟ್ಟಿನಲ್ಲಿ ರಾಜ್ಯದ ನಾಯಕರು ಒಂದು ಹಂತದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಪಟ್ಟಿಯಲ್ಲಿರುವ ಹೆಸರುಗಳು ಮತ್ತು ಗೆಲ್ಲುವ ಕಲಿಗಳನ್ನು ಗುರುತಿಸುವ ಬಗ್ಗೆಯೂ ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.