ADVERTISEMENT

ವಾರದಲ್ಲಿ ಸಂಪುಟ ಪುನಾರಚನೆ: ಕೆಲವರಿಗೆ ಕೊಕ್‌; ಅತೃಪ್ತರಿಗೆ ಲಕ್‌

‘ಆಪರೇಷನ್’ ತಡೆಗೆ ‘ಸರ್ಜರಿ’

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:52 IST
Last Updated 29 ಮೇ 2019, 19:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಜೆಪಿ ಉದ್ದೇಶಿತ ‘ಆಪರೇಷನ್‌ ಕಮಲ’ಕ್ಕೆ ತಡೆಗೋಡೆ ಕಟ್ಟಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಂದಾಗಿರುವ ಮೈತ್ರಿ ಕೂಟದ ನಾಯಕರು, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಒಂದು ವರ್ಷದ ಸಚಿವ ಸಂಪುಟಕ್ಕೆ ಭಾರಿ ‘ಸರ್ಜರಿ’ ಮಾಡಲು ನಿರ್ಧರಿಸಿದ್ದಾರೆ.

ಬುಧವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ(ಸಿಎಲ್‌ಪಿ) ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಪಡೆದ ಪಕ್ಷದ ನಾಯಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಜೂನ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ–ಪುನಾರಚನೆ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಉಪಮುಖ್ಯಮಂತ್ರಿ ಜಿ. ಪರಮೇಶ್ವರ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಉಪಾಹಾರ ಕೂಟ, ಬಳಿಕ ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ಕರೆಯಲಾಗಿದೆ. ಸಂಪುಟದಿಂದ ಯಾವ ಸಚಿವರನ್ನು ಕೈಬಿಡಬೇಕು ಎಂಬ ಬಗ್ಗೆ ಈ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ತರುವಾಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪಟ್ಟು ಸಡಿಲ: ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ಬುಧವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಹೆಣೆಯಬೇಕಾದ ಕಾರ್ಯತಂತ್ರಗಳ ಬಗ್ಗೆಸುದೀರ್ಘ ಚರ್ಚೆ ನಡೆದಿತ್ತು.

‘ಖಾಲಿ ಇರುವ ಮೂರು ಸ್ಥಾನಗಳನ್ನು ಸದ್ಯಕ್ಕೆ ಭರ್ತಿ ಮಾಡಿದರೆ ಸಾಕು. ಹಾಗೊಂದು ವೇಳೆ ಅತೃಪ್ತಿ ಸ್ಫೋಟಗೊಂಡರೆ ಮುಂದೆ ನೋಡೋಣ. ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರ್ಪಡೆ ಮಾಡುವ ಸಾಹಸಕ್ಕೆ ಈಗ ಕೈಹಾಕುವುದು ಬೇಡವೇ ಬೇಡ ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಇದಕ್ಕೆ ವೇಣುಗೋಪಾಲ್ ಕೂಡ ಸಹಮತ ವ್ಯಕ್ತಪಡಿಸಿದ್ದರು.

‘ಸರ್ಕಾರ ಉಳಿಯಬೇಕಾದರೆ ಕೆಲವರು ತ್ಯಾಗ ಮಾಡಲೇಬೇಕು. ನಮ್ಮ ಪಾಲಿಗೆ ಬಂದಿರುವ ಸಚಿವ ಸ್ಥಾನಬಿಟ್ಟುಕೊಡುವ ಜತೆಗೆ, ಇನ್ನೂ ಕೆಲವರು ರಾಜೀನಾಮೆ ಕೊಡಲು ಸಿದ್ಧರಿದ್ದಾರೆ. ಒಂದೇ ಏಟಿಗೆ ಸಂಪುಟ ಪುನಾರಚನೆ ಮಾಡೋಣ’ ಎಂದು ಕುಮಾರಸ್ವಾಮಿ ಹಟ ಮಾಡಿದ್ದರು.ಈ ಮಾತಿಗೆ ಜಿ. ಪರಮೇಶ್ವರ, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ದನಿಗೂಡಿಸಿದ್ದರು. ಆದರೆ ಒಮ್ಮತಕ್ಕೆ ಬರಲಾಗಲಿಲ್ಲ.

ಸಭೆ ಬಳಿಕ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ವೇಣುಗೋಪಾಲ್ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದರು.

ಈ ಬೆನ್ನಲ್ಲೇ, ಆರ್.ವಿ. ದೇಶಪಾಂಡೆ, ಯು.ಟಿ. ಖಾದರ್, ಜಯಮಾಲಾ ಸೇರಿದಂತೆ ಹಲವು ಸಚಿವರಿಗೆ ಕರೆ ಮಾಡಿದ್ದ ವೇಣುಗೋಪಾಲ್‌, ಸರ್ಕಾರ ಉಳಿಸಿಕೊಳ್ಳಲು ಕೆಲವರು ತ್ಯಾಗ ಮಾಡಲೇಬೇಕಾಗುತ್ತದೆ ಎಂದು ವಿಷಯ
ಪ್ರಸ್ತಾಪಿಸಿದ್ದರು.

ಮಧ್ಯಂತರ ಚುನಾವಣೆಗೆ ಒಲವಿಲ್ಲ’

‘ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲು ಮೈತ್ರಿ ಸರ್ಕಾರದ ನಾಯಕರು ತಯಾರಿದ್ದರೆ ಬಿಜೆಪಿ ಕೂಡ ಸಿದ್ಧ’ ಎಂದು ಮಂಗಳವಾರ ಹೇಳಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು, ‘ಮಧ್ಯಂತರ ಚುನಾವಣೆಗೆ ಹೋಗುವ ಬಯಕೆ ನಮ್ಮ ಪಕ್ಷದಲ್ಲಿ ಇಲ್ಲ’ ಎಂದು ಬುಧವಾರ ಹೇಳಿದರು.

‘ಮೈತ್ರಿ ಕೂಟದ ನಾಯಕರೇ ಪರಸ್ಪರ ಕಚ್ಚಾಡಿಕೊಂಡು ಸರ್ಕಾರವನ್ನು ಬೀಳಿಸಲಿದ್ದಾರೆ. ಅಂತಹ ಸಂದರ್ಭದಲ್ಲಿ ನಾವು ಸರ್ಕಾರ ರಚನೆಗೆ ಮುಂದಾಗುತ್ತೇವೆ. ಚುನಾವಣೆ ನಮ್ಮ ಉದ್ದೇಶವಲ್ಲ’ ಎಂದು ಅವರು ತಿಳಿಸಿದರು.

ರಮೇಶ ಜಾರಕಿಹೊಳಿ,ರೋಷನ್‌ ಬೇಗ್‌ ಗೈರು

ಅತೃಪ್ತ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ (ಗೋಕಾಕ) ಮತ್ತು ರೋಷನ್‌ ಬೇಗ್‌ (ಶಿವಾಜಿನಗರ) ಸಿಎಲ್‌ಪಿ ಸಭೆಗೆ ಗೈರಾದರು. ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್‌ ಪಕ್ಷದಿಂದ ದೂರವಾಗಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿಯತ್ತ ವಾಲುವುದು ಬಹುತೇಕ ಖಚಿತವಾಗಿದೆ. ಪಕ್ಷದ ನಾಯಕರ ವಿರುದ್ಧ ಇತ್ತೀಚೆಗಷ್ಟೆ ವಾಗ್ದಾಳಿ ನಡೆಸಿದ್ದ ಬೇಗ್‌ ಕೂಡಾ ಕಾಂಗ್ರೆಸ್‌ನಿಂದ ದೂರ ಸರಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ‘ಜಾರಕಿಹೊಳಿ ಮತ್ತು ಬೇಗ್‌ ಗೈರಾಗುವ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್‌) ವಿದೇಶದಲ್ಲಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ (ಬಾಗೇಪಲ್ಲಿ) ಮತ್ತು ರಾಜಶೇಖರ ಪಾಟೀಲ (ಹುಮನಾಬಾದ್‌) ಸಭೆಗೆ ಬಂದಿಲ್ಲ’ ಎಂದರು.

***
ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಸರ್ಕಾರ ಅಸ್ಥಿರಗೊಳಿಸಲು ಒಂದು ವರ್ಷದಿಂದ ಪ್ರಯತ್ನ ನಡೆಸುತ್ತಿರುವ ಬಿಜೆಪಿಯವರು ಇಂಗು ತಿಂದ ಮಂಗನಂತಾಗಿದ್ದಾರೆ.
–ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

***
ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ. ಅದನ್ನು ಮಾಧ್ಯಮಗಳಿಗೆ ವಿವರಿಸಲು ಸಾಧ್ಯವಿಲ್ಲ, ಹೇಳಿದರೆ ತಂತ್ರಗಾರಿಕೆಯಾಗಿ ಉಳಿಯುವುದಿಲ್ಲ
–ಕೆ.ಸಿ. ವೇಣುಗೋಪಾಲ್‌, ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.