ADVERTISEMENT

ಕಾಂಗ್ರೆಸ್‌ ಟೂಲ್‌ ಕಿಟ್‌ ಅಸಲಿ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 22 ಮೇ 2021, 15:23 IST
Last Updated 22 ಮೇ 2021, 15:23 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ಅವಹೇಳನಕ್ಕೆ ಕಾಂಗ್ರೆಸ್‌ ಪಕ್ಷವು ಸಿದ್ಧಪಡಿಸಿ, ಹರಿಬಿಟ್ಟಿರುವ ‘ಟೂಲ್ ಕಿಟ್‌’ ಅಸಲಿಯಾದದ್ದು. ಟೂಲ್‌ ಕಿಟ್‌ನಲ್ಲಿರುವ ಮಾಹಿತಿ ಮತ್ತು ಕಾಂಗ್ರೆಸ್‌ನ ಕ್ರಿಯೆ, ಪ್ರತಿಕ್ರಿಯೆಗಳಿಗೆ ಸಾಮ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟೂಲ್‌ ಕಿಟ್‌ನಲ್ಲಿರುವ ಮಾಹಿತಿ ಪ್ರಕಾರವೇ ಕಾಂಗ್ರೆಸ್‌ನ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಇದ್ದುದು ಕಾಕತಾಳೀಯವೆ? ಅಥವಾ ಟೂಲ್‌ ಕಿಟ್‌ ಮಾದರಿಯಲ್ಲೇ ಅವಹೇಳನ ಮತ್ತು ಅಪಪ್ರಚಾರ ನಡೆದಿದೆಯೆ’ ಎಂದು ಪ್ರಶ್ನಿಸಿದರು.

ಟೂಲ್‌ ಕಿಟ್‌ ಮತ್ತು ಕಾಂಗ್ರೆಸ್‌ನ ನಡವಳಿಕೆಗಳಲ್ಲಿ ಇರುವ ಸಾಮ್ಯತೆ ಕಾಕತಾಳೀಯ ಅಲ್ಲ. ಅದು ಪೂರ್ವಯೋಜಿತ ಕೃತ್ಯ ಎಂಬುದು ಸಾಬೀತಾಗಿದೆ. ‘ಕುಂಭ ಮೇಳ ಕೊರೊನಾ ವೈರಾಣು ಸೋಂಕನ್ನು ವ್ಯಾಪಕವಾಗಿ ಹಂಚಿದೆ (ಸೂಪರ್‌ ಸ್ಪ್ರೆಡರ್‌)’ ಎಂಬ ಮಾತು ಟೂಲ್‌ ಕಿಟ್‌ನಲ್ಲಿದೆ. ಅದೇ ಮಾತನ್ನು ಕಾಂಗ್ರೆಸ್‌ನ ಕೆಲವು ಮುಖಂಡರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ಹಂಚಿಕೊಂಡಿದ್ದಾರೆ ಎಂದರು.

ADVERTISEMENT

ದೇಶದಲ್ಲಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆದಿದೆ. ಕೊರೊನಾ ವೈರಾಣು ಚೀನಾದಿಂದ ಬಂದಿದೆ ಎಂದು ಹೇಳಲು ಕಾಂಗ್ರೆಸ್‌ ಮುಖಂಡರಿಗೆ ಧೈರ್ಯವಿಲ್ಲ. ಮೋದಿ ತಳಿ, ಭಾರತೀಯ ತಳಿ ಎಂದು ವೈರಾಣುವನ್ನು ಉಲ್ಲೇಖಿಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವರು ಈ ಮಾತನ್ನು ಹೇಳಿದ್ದಾರೆ ಎಂದು ದೂರಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಾಪತ್ತೆಯಾಗಿದ್ದಾರೆ ಎಂಬ ಪದವನ್ನು ಟ್ವೀಟ್‌ನಲ್ಲಿ ಬಳಸಿರುವುದು, ವೆಂಟಿಲೇಟರ್‌ಗಳು ಕಳಪೆ ಎಂಬ ಆರೋಪ, ಸೆಂಟ್ರಲ್‌ ವಿಸ್ತಾ ಯೋಜನೆ ಮತ್ತು ಪಿಎಂ ಕೇರ್ಸ್‌ ನಿಧಿಯ ನಡುವೆ ನಂಟು ಕಲ್ಪಿಸಿರುವುದು, ಪ್ರಧಾನಿ ಜೀವ ಭಯದಿಂದ ಲಸಿಕೆ ಹಾಕಿಕೊಂಡಿಲ್ಲ ಎಂದು ಆರೋಪಿಸಿರುವುದೆಲ್ಲವೂ ಟೂಲ್‌ ಕಿಟ್‌ನ ಭಾಗವಾಘಿಯೇ ನಡೆದಿದೆ. ‘ಟೂಲ್‌ ಕಿಟ್‌ನಿಂದ ಉತ್ತಮ ಕೆಲಸ ನಡೆದಿದೆ’ ಎಂದು ಕಾಂಗ್ರೆಸ್‌ ಪದಾಧಿಕಾರಿ ಸಂಯುಕ್ತ ಬಸು ಹೇಳಿಕೊಂಡಿದ್ದಾರೆ. ಇದೆಲ್ಲವೂ ಕಾಂಗ್ರೆಸ್‌ ಪಕ್ಷದ ಪಾತ್ರವನ್ನು ತೆರೆದಿಡುತ್ತವೆ ಎಂದು ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.