ADVERTISEMENT

ನಾಳೆ ಗೋಡ್ಸೆಯನ್ನೂ ಪಠ್ಯದಲ್ಲಿ ಸೇರಿಸಬೇಕು ಅಂದ್ರೆ?: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 20:08 IST
Last Updated 23 ಮೇ 2022, 20:08 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: 'ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಹೆಡಗೇವಾರ್ ವಿಷಯ ಪಠ್ಯಕ್ಕೆ ಸೇರಿದರೆ ಯಾವ ಸಮಸ್ಯೆಯೂ ಇಲ್ಲ. ನಾಗೇಶ್ ಅವರು ಆರೆಸ್ಸೆಸ್‌ನವರು. ಹೆಡಗೇವಾರ್ ಆರೆಸ್ಸೆಸ್ ಸಂಸ್ಥಾಪಕರು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದರು.

ಜಯನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾಳೆ ಗೋಡ್ಸೆಯನ್ನು ಪಠ್ಯದಲ್ಲಿ ಸೇರಿಸಬೇಕು ಅಂದ್ರೆ' ಎಂದು ಪ್ರಶ್ನಿಸಿದರು. 'ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವವರು, ದೇಶಪ್ರೇಮ ಇರುವವರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿ, ನಾವು ಬೇಡ ಹೇಳಲ್ಲ' ಎಂದರು.

'ಪಠ್ಯಪುಸ್ತಕವು ಧರ್ಮ ನಿರಪೇಕ್ಷತೆ, ವೈಚಾರಿಕತೆ, ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡಬೇಕು. ವಿದ್ಯಾರ್ಥಿಗಳ ಜ್ಞಾನ ವಿಕಾಸವಾಗಬೇಕು. ಹೀಗಾಗಿ ಯಾವುದೇ ಧರ್ಮದ ವಿಚಾರಗಳನ್ನು ತುರುಕಬಾರದು. ನಮ್ಮದು ಜಾತ್ಯತೀತ ರಾಷ್ಟ್ರ. ಮಕ್ಕಳಲ್ಲಿ ಇದೇ ಭಾವನೆ ಬೆಳೆಸುವ ಕೆಲಸ ಮಾಡಬೇಕು. ಅಂಧಶ್ರದ್ಧೆಯನ್ನು ಮಕ್ಕಳಿಗೆ ಕಲಿಸಬಾರದು' ಎಂದರು.

ADVERTISEMENT

'ಕುವೆಂಪು ಅವರ ಬಗ್ಗೆ, ನಾಡಗೀತೆ ಬಗ್ಗೆ ಲಘುವಾಗಿ ಮಾತನಾಡಲು ಹೋಗಬಾರದು. ಅವರು ರಾಷ್ಟ್ರಕವಿ. ಪಠ್ಯ ಪರಿಷ್ಕರಣೆ ಮಾಡಲು ವಿಷಯ ತಜ್ಞರ ಸಮಿತಿ ಮಾಡಬೇಕು, ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಯಾರ ಪಠ್ಯ ಇರಬೇಕು, ಯಾರ ಪಠ್ಯ ಇರಬಾರದು ಅವರು ನಿರ್ಧಾರ ಮಾಡಲಿ. ರೋಹಿತ್ ಚಕ್ರತೀರ್ಥ ಆರ್‌ಎಸ್‌ಎಸ್ ನವರು, ಅವರ ಬದಲು ಯಾವುದೇ ಪಕ್ಷ, ಸಂಘಟನೆಗೆ ಸೇರದ ವಿಷಯ ತಜ್ಞರನ್ನು ಅಧ್ಯಕ್ಷರಾಗಿ ಮಾಡಿ. ಭಗತ್‌‌ ಸಿಂಗ್‌‌, ಮಹಾತ್ಮ ಗಾಂಧಿ, ಅಂಬೇಡ್ಕರ್, ನಾರಾಯಣ ಗುರುಗಳ ವಿಚಾರಗಳನ್ನು ಓದುವುದರಿಂದ ದೇಶಭಕ್ತಿ, ಸಹಿಷ್ಣುತೆ, ಸೌಹಾರ್ದತೆಯ ಮೌಲ್ಯಗಳು ಉದ್ದೀಪನವಾಗುತ್ತದೆ. ಬುದ್ಧ, ಬಸವಣ್ಣ, ಕನಕದಾಸರು ಇವರೆಲ್ಲ ಸಮಾಜ ಸುಧಾರಕರು, ಇಂಥವರ ಬಗ್ಗೆ ಮಕ್ಕಳಿಗೆ ಹೇಳಿ. ಮಕ್ಕಳ ಜ್ಞಾನ ವಿಕಾಸವಾಗಬೇಕೋ? ಸಂಕುಚಿತವಾಗಬೇಕೋ? ವೈಚಾರಿಕತೆ ಬೆಳೆಸಿಕೊಳ್ಳಬೇಕೋ? ಬೇಡವೋ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.