ADVERTISEMENT

ಬಿಎಸ್‌ವೈ ಬೆಂಬಲಕ್ಕೆ ಕಾಂಗ್ರೆಸ್‌ನ ಲಿಂಗಾಯತ ನಾಯಕರು!

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 17:01 IST
Last Updated 19 ಜುಲೈ 2021, 17:01 IST
   

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಿದರೆ ಬಿಜೆಪಿ ವೀರಶೈವ–ಲಿಂಗಾಯತರ ಅವಕೃಪೆಗೆ ಒಳಗಾಗಬೇಕಾಗುತ್ತದೆ’ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕರೂ ಲಿಂಗಾಯತ ಸಮುದಾಯದ ಪ್ರಮುಖರೂ ಆಗಿರುವ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳ ಜತೆ ಸೋಮವಾರ ಸಂಜೆ ಯಡಿಯೂರಪ್ಪ ಅವರನ್ನು ಭೇಟಿಮಾಡಿದ ಶಾಮನೂರು, ಕೆಲಕಾಲ ಮಾತುಕತೆ ನಡೆಸಿದರು.

ADVERTISEMENT
ಮುಖ್ಯಮಂತ್ರಿಯವರ ನಿವಾಸಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಅವರೊಂದಿಗೆ ಉಪಾಹಾರ ಸೇವಿಸಿದರು. ಯಡಿಯೂರಪ್ಪ ಅವರ ಹಿರಿಯ ಮಗಳು ಪದ್ಮಾವತಿ ಇದ್ದರು

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,‘ಹಿಂದೆ ನಮ್ಮ ಸಮುದಾಯಕ್ಕೆ ಸೇರಿದ ಎಸ್‌. ನಿಜಲಿಂಗಪ್ಪ, ವೀರೇಂದ್ರ ‍ಪಾಟೀಲ, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಬಳಿಕ ರಾಜಕೀಯವಾಗಿ ಏನಾಯಿತು ಎಂಬುದನ್ನು ಬಿಜೆಪಿ ನಾಯಕರು ನೆನಪಿಸಿಕೊಳ್ಳಬೇಕು’ ಎಂದರು.

30 ವರ್ಷಗಳಿಗೂ ಹೆಚ್ಚು ಕಾಲ ಬಿಜೆಪಿಗಾಗಿ ದುಡಿದವರು ಯಡಿಯೂರಪ್ಪ. ಅವರ ಹಿಂದೆ ಜನರಿದ್ದಾರೆ. ಈಗ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದರೆ ಬಿಜೆಪಿಗೆ ಅನುಕೂಲವಾಗುವುದಿಲ್ಲ. ಅದರಿಂದ ಬೇರೆಯವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

‘ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತು ಯಾವುದೇ ತೀರ್ಮಾನ ಆಗಿಲ್ಲ. ಈ ಕುರಿತು ವದಂತಿಗಳು ಹರಿದಾಡುತ್ತಿವೆ. ಸಮುದಾಯದ ಬೇರೆ ಯಾರಿಗೇ ಮುಖ್ಯಮಂತ್ರಿ ಸ್ಥಾನ ನೀಡಿದರೂ ಯಡಿಯೂರಪ್ಪ ಇದ್ದಂತೆ ಆಗುವುದಿಲ್ಲ. ಯಡಿಯೂರಪ್ಪ ಅವರ ಹಿಂದೆ ಮಾತ್ರ ಸಮುದಾಯದ ಬೆಂಬಲ ಇದೆ’ ಎಂದರು.

ಎಂ.ಬಿ. ಪಾಟೀಲ ಬೆಂಬಲ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು ಎಂದು ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ ಕೂಡ ಒತ್ತಾಯಿಸಿದ್ದಾರೆ. ಸೋಮವಾರ ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಪಾಟೀಲ, ಬಳಿಕ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

‘ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ಪಾತ್ರರಾಗುತ್ತಾರೆ. ಯಡಿಯೂರಪ್ಪ ಅವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ ಅವರನ್ನು ಘನತೆ ಹಾಗೂ ಮರ್ಯಾದೆಯಿಂದ ನಡೆಸಿಕೊಳ್ಳಬೇಕು’ ಎಂದು ಪಾಟೀಲ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.