ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆ: ಶಿಕ್ಷಣಕ್ಕೆ ಪ್ರಮುಖ ಆದ್ಯತೆ; ರಾಹುಲ್‌ ಗಾಂಧಿ ಭರವಸೆ

ಎನ್‌ಇಪಿಯಿಂದ ಶೈಕ್ಷಣಿಕ ತುರ್ತುಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 12:42 IST
Last Updated 7 ಅಕ್ಟೋಬರ್ 2022, 12:42 IST
ಭಾರತ್‌ ಜೋಡೆ ಪಾದಯಾತ್ರೆ ಅಂಗವಾಗಿ ನಾಗಮಂಗಲ ತಾಲ್ಲೂಕು ಅಂಚೆಬೂವನಹಳ್ಳಿ ಗ್ರಾಮದ ಬಳಿ ನಡೆದ ಶೈಕ್ಷಣಿಕ ಸಂವಾದದಲ್ಲಿ ರಾಹುಲ್‌ ಗಾಂಧಿ ಜೊತೆ ಶಾಲಾ–ಕಾಲೇಜುಗಳ ಅಧ್ಯಾಪಕರು, ತಜ್ಞರು ಭಾಗವಹಿಸಿದ್ದರು
ಭಾರತ್‌ ಜೋಡೆ ಪಾದಯಾತ್ರೆ ಅಂಗವಾಗಿ ನಾಗಮಂಗಲ ತಾಲ್ಲೂಕು ಅಂಚೆಬೂವನಹಳ್ಳಿ ಗ್ರಾಮದ ಬಳಿ ನಡೆದ ಶೈಕ್ಷಣಿಕ ಸಂವಾದದಲ್ಲಿ ರಾಹುಲ್‌ ಗಾಂಧಿ ಜೊತೆ ಶಾಲಾ–ಕಾಲೇಜುಗಳ ಅಧ್ಯಾಪಕರು, ತಜ್ಞರು ಭಾಗವಹಿಸಿದ್ದರು   

ಮಂಡ್ಯ: ಭಾರತ್‌ ಜೋಡೊ ಯಾತ್ರೆಯ ಅಂಗವಾಗಿ ರಾಹುಲ್‌ಗಾಂಧಿ ಶುಕ್ರವಾರ ನಾಗಮಂಗಲ ತಾಲ್ಲೂಕು ಅಂಚೆಬೂವನಹಳ್ಳಿ ಗ್ರಾಮದ ಬಳಿ ನಡೆಸಿದ ‘ಶೈಕ್ಷಣಿಕ ಸಂವಾದ’ದಲ್ಲಿ ನೂತನ ಶಿಕ್ಷಣ ನೀತಿ ಪ್ರಮುಖವಾಗಿ ಚರ್ಚೆಗೆ ಬಂತು. ಸಂವಾದದಲ್ಲಿ ಶಾಲಾ, ಕಾಲೇಜುಗಳ ಅಧ್ಯಾಪಕರು, ಶೈಕ್ಷಣಿಕ ತಜ್ಞರು, ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.

ಸಂವಾದ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ರಾಜೀವ್‌ಗೌಡ ‘ಹೊಸ ಶಿಕ್ಷಣ ನೀತಿಯಿಂದಾಗಿ ಕಳೆದ 75 ವರ್ಷಗಳಿಂದ ಕಟ್ಟಿದ್ದ ಶೈಕ್ಷಣಿಕ ಅಡಿಪಾಯಕ್ಕೆ ಧಕ್ಕೆಯಾಗಿದೆ. ಶಿಕ್ಷಣದಲ್ಲಿ ಕೋಮುವಾದ, ಕೇಂದ್ರೀಕರಣ ಹಾಗೂ ವಾಣಿಜ್ಯೀಕರಣದಿಂದ (3ಸಿ– ಕಮ್ಯೂನಲೈಸೇಷನ್‌, ಸೆಂಟ್ರಲೈಸೇಷನ್‌, ಕಮರ್ಷಿಯಲೈಸೇಷನ್‌) ದೇಶದಲ್ಲಿ ಶೈಕ್ಷಣಿಕ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕರೊಬ್ಬರು ಆತಂಕ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

‘ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸುವ ಮೂಲಕ ಮಕ್ಕಳ ಮನಸ್ಸಿನ ಮೇಲೆ ವಿಷ ಬೀಜ ಬಿತ್ತಲಾಗುತ್ತಿದೆ. ಕರ್ನಾಟಕದಲ್ಲಿ ನಡೆದ ಪಠ್ಯಪುಸ್ತಕ ಪರಿಷ್ಕರಣೆ ವೇಳೆ ಹೊಸ ಪುರಾಣವನ್ನೇ ಸೃಷ್ಟಿಸಲಾಗಿದೆ. ಸಾವರ್ಕರ್‌ ಅವರು ಬುಲ್‌ಬುಲ್‌ ಹಕ್ಕಿಯ ಮೇಲೆ ಕುಳಿತು ತಾಯ್ನಾಡಿಗೆ ಬರುತ್ತಿದ್ದರು ಎಂದೆಲ್ಲಾ ಬರೆಯಲಾಗಿದೆ ಎಂಬ ವಿಚಾರ ಚರ್ಚೆಗೆ ಬಂದವು. ಇದನ್ನು ಕೇಳಿ ರಾಹುಲ್‌ ಗಾಂಧಿ ಆಶ್ಚರ್ಯ ವ್ಯಕ್ತಪಡಿಸಿದರು’ ಎಂದರು.

ADVERTISEMENT

‘ಶಿಕ್ಷಕಿ ಪೂರ್ಣಿಮಾ ಅವರು ಸರ್ಕಾರಿ ಶಾಲೆಗಳ ಸ್ಥಿತಿಯ ಬಗ್ಗೆ ಗಮನ ಸೆಳೆದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಸಮರ್ಪಕ ಸೌಲಭ್ಯಗಳು ಸಿಗದ ಪರಿಣಾಮ ಎಲ್ಲರೂ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಬಡವರು ಕೂಡ ಹೆಚ್ಚೆಚ್ಚು ಶುಲ್ಕ ಪಾವತಿಸಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವುದು ಯಾವಾಗ ಎಂಬ ಪ್ರಶ್ನೆ ಬಂತು’ ಎಂದರು.

ರಾಹುಲ್‌ ಗಾಂಧಿ ಉತ್ತರಿಸಿ, ಜಿಡಿಪಿಯಲ್ಲಿ ಶೇ 6ರಷ್ಟು ಹಣವನ್ನು ಶಿಕ್ಷಣ ಹಾಗೂ ಆರೋಗ್ಯಕ್ಕೆ ಮೀಸಲಿಡುವುದಾಗಿ ಸರ್ಕಾರಗಳು ಭರವಸೆ ನೀಡುತ್ತವೆ. ಆದರೆ ವಾಸ್ತವವಾಗಿ ಅನುದಾನ ನೀಡುವುದಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳನ್ನು ಬಹಳ ಚೆನ್ನಾಗಿ ನಡೆಸಬಹುದು. ಕೇಂದ್ರೀಯ ವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ಇವು ಚೆನ್ನಾಗಿಯೇ ನಡೆಯುತ್ತಿವೆ ಎಂದು ಉತ್ತರಿಸಿದರು’ ಎಂದರು.

‘ಮುಂದಿನ ಯಾವುದೇ ಚುನಾವಣೆ ಬಂದರೂ ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಿದೆ. ಇದು ಪಕ್ಷದ ಪ್ರಣಾಳಿಕೆಯಾಗುವ ಬದಲು ಜನರ ಅಭಿಪ್ರಾಯ ಆಗಿರಲಿದೆ. ಆಯಾ ಕ್ಷೇತ್ರಗಳ ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆ ಪಡೆದು ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಇದ್ದರು.


********

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎನ್‌ಇಪಿ ರದ್ದು

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೂತನ ಶಿಕ್ಷಣ ನೀತಿಯನ್ನು ರದ್ದು ಮಾಡಲಾಗುವುದು. ಸಂವಿಧಾನದ ಮೌಲ್ಯಗಳಿಗೆ ಆಧಾರಿತವಾದ ಶಿಕ್ಷಣ ವ್ಯವಸ್ಥೆ ಇರಬೇಕು. ಕೋಮುವಾದವೇ ತುಂಬಿರುವ, ನಾಗ್‌ಪುರ ವಿವಿಯಿಂದ ಬಂದಿರುವ ಶಿಕ್ಷಣ ನೀತಿಯ ಪ್ರತಿ ಪದವನ್ನು ನಾವು ರದ್ದುಗೊಳಿಸತ್ತೇವೆ’ ಎಂದು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ತಿಳಿಸಿದರು.

‘ಯಾವುದೇ ಚರ್ಚೆ ಇಲ್ಲದೇ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಜೊತೆಗೆ ಯಾವುದೇ ಸಿದ್ಧತೆಯೂ ಇಲ್ಲದೆ ವಿದ್ಯಾರ್ಥಿಗಳ ಮೇಲೆ ಹೇರಲಾಗಿದೆ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ಕಾರಣ ಶಿಕ್ಷಣ ನೀತಿಯನ್ನು ಬದಲಾಯಿಸಬಹುದು’ ಎಂದು ಪ್ರೊ.ರಾಜೀವ್‌ ಗೌಡ ಹೇಳಿದರು.

*********

ಆರ್‌ಎಸ್‌ಎಸ್‌ ಶಾಲೆಗಳಿಗೆ ಹಣ ಎಲ್ಲಿಂದ ಬರುತ್ತೆ?

‘ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳಿಗೆ ಅನುದಾನ ಬರುತ್ತಿಲ್ಲ. ಅದೇ ಅನುದಾನವನ್ನು ಆರ್‌ಎಸ್‌ಎಸ್‌ ನಡೆಸುವ ಶಾಲೆಗಳಿಗೆ ನೀಡಲಾಗುತ್ತಿದೆ. ಆರ್‌ಎಸ್‌ಎಸ್‌ ಶಾಲೆಗಳಿಗೆ ಎಲ್ಲಿಂದ ಹಣ ಬರುತ್ತದೆ? ಈ ಬಗ್ಗೆ ಆ ಶಾಲೆಗಳು ಲೆಕ್ಕ ನೀಡುತ್ತಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂಬ ಒತ್ತಾಯವೂ ಸಂವಾದದಲ್ಲಿ ಕೇಳಿ ಬಂತು’ ಎಂದು ರಾಜೀವ್‌ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.