ADVERTISEMENT

ಲೋಕ ಸಮರಕ್ಕೆ ಸಿದ್ಧತೆ: ಕಾಂಗ್ರೆಸ್‌ ನಿರ್ಣಾಯಕ ಸಭೆ ಸೋಮವಾರ

ಅಭ್ಯರ್ಥಿ ಆಯ್ಕೆಗೆ ಹಿರಿಯ ಮುಖಂಡರ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 20:27 IST
Last Updated 17 ಫೆಬ್ರುವರಿ 2019, 20:27 IST
   

ಬೆಂಗಳೂರು: ಮಿತ್ರ ಪಕ್ಷ ಜೆಡಿಎಸ್‌ ಸಖ್ಯದೊಂದಿಗೆ ಲೋಕಸಭೆಯ ಕನಿಷ್ಠ 20 ಸ್ಥಾನಗಳನ್ನು ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ಚುನಾವಣಾ ಪೂರ್ವ ತಯಾರಿಗೆ ಭರ್ಜರಿ ಆರಂಭ ನೀಡಲು ಮುಂದಾಗಿದೆ.

ಈ ಸಂಬಂಧ ಮಹತ್ವದ ಸಭೆಗಳು ಸೋಮವಾರ ಚಾನ್ಸರಿ ಹೋಟೆಲ್‌ನಲ್ಲಿ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿರುವ ಚುನಾವಣಾ ಸಮಿತಿ, ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿರುವ ಸಮನ್ವಯ ಸಮಿತಿಯ ಸಭೆಗಳು ನಡೆಯಲಿವೆ. ಇದಕ್ಕೆ ಪೂರಕವಾಗಿರುವ ಸಿ.ಎಂ. ಇಬ್ರಾಹಿಂ ಅಧ್ಯಕ್ಷತೆಯ ಪಬ್ಲಿಸಿಟಿ ಸಮಿತಿ ಸಭೆ ಕೂಡ ನಡೆಯಲಿದೆ.

ಕ್ಷೇತ್ರ ಹಂಚಿಕೆ ಚರ್ಚೆ: 28 ಲೋಕಸಭಾ ಕ್ಷೇತ್ರಗಳ ಪೈಕಿ 10ರಿಂದ 12 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಜೆಡಿಎಸ್ ನಾಯಕರು ಬೇಡಿಕೆ ಮಂಡಿಸಿದ್ದಾರೆ. ಈ ಪಟ್ಟಿನ ಬೆನ್ನಲ್ಲೇ, ಹೊಂದಾಣಿಕೆಗೆ ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬೇಡ ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಅವರನ್ನು ಭೇಟಿಯಾದ ಸಂಸದರ ನಿಯೋಗವೇ ಮನವಿ ಮಾಡಿದೆ.

ADVERTISEMENT

ಈ ರಾಜಕೀಯಗಳ ಮಧ್ಯೆಯೇ ನಡೆಯುತ್ತಿರುವ ಚುನಾವಣಾ ಸಮಿತಿ ಸಭೆ ಹೆಚ್ಚಿನ ಮಹತ್ವ ಪಡೆದಿದೆ. ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ, ಆಸ್ಕರ್ ಫರ್ನಾಂಡೀಸ್‌, ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯಿಲಿ, ಎಚ್‌.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಡಿ.ಕೆ. ಶಿವಕುಮಾರ್ ಸೇರಿದಂತೆ 27ಕ್ಕೂ ಹೆಚ್ಚು ಪ್ರಮುಖರು ಭಾಗಿಯಾಗಲಿದ್ದಾರೆ.

2009 ಹಾಗೂ 2014ರಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಎರಡು ಪಕ್ಷಗಳು ಪಡೆದ ಮತದ ಶೇಕಡಾವಾರು ಪ್ರಮಾಣ, ಯಾವ ಕ್ಷೇತ್ರಗಳಲ್ಲಿ ಯಾರ ಸಾಮರ್ಥ್ಯ ಎಷ್ಟು ಎಂಬ ಮಾಹಿತಿಯನ್ನು ಮಂಡಿಸಿ ಚರ್ಚೆ ನಡೆಸಲಾಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಕ್ಷೇತ್ರವಾರು ಪಡೆದ ಮತಗಳ ಶೇಕಡಾವಾರು ಪ್ರಮಾಣದ ಲೆಕ್ಕವನ್ನೂ ಸಭೆಯ ಮುಂದಿಡಲಾಗುತ್ತದೆ. ಮೈತ್ರಿ ಮಾಡಿಕೊಂಡರೆ ಆಗುವ ಲಾಭ ಅಥವಾ ನಷ್ಟದ ಲೆಕ್ಕಾಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಜಿಲ್ಲಾವಾರು ಹಾಗೂ ಪ್ರಾದೇಶಿಕವಾರು ಸಭೆಯನ್ನು ಈಗಾಗಲೇ ನಡೆಸಲಾಗಿದೆ. ಆ ಸಭೆಗಳಲ್ಲಿ ಪಾಲ್ಗೊಂಡು ಪ್ರಮುಖರು, ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ವಿವರ ನೀಡಿದ್ದಾರೆ. ಎಲ್ಲ ಕ್ರೋಡೀಕರಿಸಿ ಸಭೆ ಮುಂದಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್‌ ಜತೆಗೆ ಕ್ಷೇತ್ರ ಹಂಚಿಕೆಯ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಸಭೆಯಲ್ಲಿ ಒಡಮೂಡುವ ಅಭಿಪ್ರಾಯ, ಸಲಹೆ ಹಾಗೂ ತಕರಾರುಗಳನ್ನು ಒಗ್ಗೂಡಿಸಿ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು ಎಂದು ಮೂಲಗಳು ವಿವರಿಸಿವೆ.

ಸಮನ್ವಯ ಸಮಿತಿ ಸಭೆ: ಇದಕ್ಕೆ ಮುನ್ನ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದಿರುವ ಬೆಳವಣಿಗೆಗಳು, ಎರಡು ಬಜೆಟ್‌ಗಳಲ್ಲಿ ಘೋಷಿಸಿರುವ ಕಾರ್ಯಕ್ರಮಗಳು, ಮೈತ್ರಿ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಸರ್ಕಾರ ಹಾಗೂ ಪಕ್ಷದ ಕಾರ್ಯಕ್ರಮಗಳನ್ನು ಮತದಾರರ ಮನೆಬಾಗಿಲಿಗೆ ಮುಟ್ಟಿಸುವ ಯೋಜನೆ ರೂಪಿಸುವ ಬಗ್ಗೆ ಸಮಾಲೋಚನೆ ನಡೆಯಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ ಧೋರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಜನಪರ ಕಾರ್ಯಕ್ರಮ ಹಾಗೂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಐದು ವರ್ಷಗಳ ಸಾಧನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

**

ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ: ಜಿ. ಪರಮೇಶ್ವರ

ಚುನಾವಣಾ ಸಮಿತಿ ಸಭೆಯಲ್ಲಿ ಲೋಕಸಭೆ ಚುನಾವಣೆಯ ಕ್ಷೇತ್ರ ಹಂಚಿಕೆ‌ ಕುರಿತು ಚರ್ಚೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿಜಿ. ಪರಮೇಶ್ವರ ಅವರು ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾವ ಲೋಕಸಭೆ ಕ್ಷೇತ್ರದಲ್ಲಿಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಹಾಗೂ ಕ್ಷೇತ್ರ ಆಯ್ಕೆ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.

ಐದು ವರ್ಷ ಕಾಂಗ್ರೆಸ್ ಆಳ್ವಿಕೆ ಹಾಗೂ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಯಾರನ್ನು ಕಣಕ್ಕೆ ಇಳಿಸಿದರೆ ಗೆಲುವು ಸುಲಭ ಎಂಬ ಬಗ್ಗೆ ಸಮಾಲೋಚನೆ ನಡೆಯಲಿದೆ ಎಂದರು.

**

‘ಮನೆಯಿಂದ ಮೋದಿ ಹಣ ಕೊಟ್ಟಿಲ್ಲ’

ರಾಯಚೂರು: ‘ಪ್ರತಿ ವರ್ಷ ತೆರಿಗೆ ವಸೂಲಿ ಹೆಚ್ಚಳವಾಗುತ್ತಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಂದಿದೆಯೇ ವಿನಾ ಪ್ರಧಾನಿ ಮೋದಿ ತಮ್ಮ ಮನೆಯಿಂದ ನೀಡಿಲ್ಲ’ ಎಂದು ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

‘ಮಹಾ ಘಟಬಂದನ್‌ದಲ್ಲಿ ಪ್ರಧಾನಿಯಾಗುವ ಅಭ್ಯರ್ಥಿಗಳು ಯಾರೂ ಇಲ್ಲ’ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಹೇಳಿಕೆಗೆ ಎದುರೇಟು ನೀಡಿದ ಸಿದ್ದರಾಮಯ್ಯ, ‘ಪ್ರಧಾನಿ ಆಗುವ ಅರ್ಹತೆ ನರೇಂದ್ರ ಮೋದಿ ಒಬ್ಬರಿಗೇ ಇಲ್ಲ. ದೇಶದಲ್ಲಿ ಲಕ್ಷಾಂತರ ನಾಯಕರಿಗೆ ಅರ್ಹತೆ ಇದೆ. ರಾಹುಲ್ ಗಾಂಧಿ, ಮಾಯಾವತಿ, ಚಂದ್ರಬಾಬು ನಾಯ್ಡು, ದೇವೇಗೌಡ ಅವರಂತಹ ಯೋಗ್ಯ ನಾಯಕರು ಘಟಬಂದನ್‌ದಲ್ಲಿ ಇದ್ದಾರೆ’ ಎಂದರು.

ಗೊಂದಲ ಬೇಡ: ‘ರಾಜ್ಯದಲ್ಲಿ ಕಾಂಗ್ರೆಸ್ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಯಾವುದೇ ಗೊಂದಲ ಬೇಡ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.