ADVERTISEMENT

ಮತ ಕಳವು: ಯುವ ಕಾಂಗ್ರೆಸ್ ಕಿಡಿ

ಪ್ರಧಾನಿ ಮೋದಿ, ಚುನಾವಣಾ ಆಯೋಗದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 14:34 IST
Last Updated 15 ನವೆಂಬರ್ 2025, 14:34 IST
ಮತ ಕಳವು ನಡೆಸಿ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಿದೆ ಎಂದು ಆರೋಪಿಸಿ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ  ಎಚ್. ಎಸ್. ಮಂಜುನಾಥ್ ಗೌಡ, ಜಿ.ಸಿ. ಚಂದ್ರಶೇಖರ್‌, ಸಚಿವ ಸಂತೋಷ್‌ ಲಾಡ್‌, ಸಲೀಂ ಅಹ್ಮದ್‌ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು
ಮತ ಕಳವು ನಡೆಸಿ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆದ್ದಿದೆ ಎಂದು ಆರೋಪಿಸಿ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ  ಎಚ್. ಎಸ್. ಮಂಜುನಾಥ್ ಗೌಡ, ಜಿ.ಸಿ. ಚಂದ್ರಶೇಖರ್‌, ಸಚಿವ ಸಂತೋಷ್‌ ಲಾಡ್‌, ಸಲೀಂ ಅಹ್ಮದ್‌ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು   

ಬೆಂಗಳೂರು: ‘ಮತಪಟ್ಟಿ ಬದಲಾವಣೆಯಿಂದ ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಆರೋಪಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ ಕಳವು ನಡೆಸುತ್ತಿದೆ ಎಂದು ಆರೋಪಿಸಿ ರಾಜ್ಯ ಯುವ ಕಾಂಗ್ರೆಸ್‌ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಚುನಾವಣಾ ಆಯೋಗದ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೆ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಆಕ್ರೋಶ ಹೊರಹಾಕಿದರು.

ADVERTISEMENT

‘ಬಿಹಾರ ಚುನಾವಣೆಯಲ್ಲಿ ನಾವು ಯಾಕೆ ಸೋತೆವು ಎಂದು ತೋರಿಸುವ ಪ್ರಯತ್ನವಾಗಿ ಈ ಪ್ರತಿಭಟನೆ ನಡೆದಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ಪಟ್ಟಿ ಬದಲಾವಣೆ ಆಗಿದೆ. ಈ ಬಗ್ಗೆ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದ ಗಮನ ಸೆಳೆದಿದ್ದರು. ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಬಂದು ಐದಾರು ತಿಂಗಳಾಯಿತು. ಬಿಹಾರ, ಮಹಾರಾಷ್ಟ್ರ, ಹರಿಯಾಣದಲ್ಲಿ ಮತಪಟ್ಟಿ ಬದಲಾವಣೆ ಮಾಡಿದರು. ನಾವು ದೇಶದ ಜನರಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಲಾಡ್‌ ಹೇಳಿದರು.

ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ‘ಮತ ಕಳವು ನಾವು ಸಹಿಸಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಹೋರಾಟದ ಮಾರ್ಗ ಅನಿವಾರ್ಯ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ರಕ್ಷಣೆಗೆ ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಹೋರಾಟ ನಡೆಸಲಿದೆ’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮಾತನಾಡಿ, ‘ಕರ್ನಾಟಕದಲ್ಲಿ ಬಿಜೆಪಿಗೆ ನಾಯಕತ್ವ ಇಲ್ಲ. ಜೆಡಿಎಸ್ ಅಧೋಗತಿಗೆ ಹೋಗುತ್ತಿದೆ. ಆ ಎರಡೂ ಪಕ್ಷಗಳಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ರೀತಿಯ ವರ್ಚಸ್ಸಿನ ಮುಖ ಇಲ್ಲ. ಅವರು ಏನೇ ಕಸರತ್ತು ಮಾಡಿದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ’ ಎಂದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್. ಮಂಜುನಾಥ್ ಗೌಡ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಬಿಹಾರದಲ್ಲಿ ಮತಕಳವು ಅಲ್ಲ ಮತಗಳ ದರೋಡೆ ಆಗಿದೆ. ಅಲ್ಲಿನದು ಜನಾಭಿಪ್ರಾಯವಲ್ಲ. ಬಿಹಾರ ಗೆಲ್ಲಲು ಮೋದಿ ಅಮಿತ್ ಶಾ ಚುನಾವಣಾ ಆಯೋಗದೊಂದಿಗೆ ಸೇರಿ ಷಡ್ಯಂತ್ರ ನಡೆಸಿದ್ದಾರೆ
ಸಲೀಂ ಅಹ್ಮದ್ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.