ADVERTISEMENT

ಚುನಾವಣೆ ತಂತ್ರ; ಟಿಕೆಟ್‌ಗೆ ಗುದ್ದಾಟ!

ತಾರಕಕ್ಕೇರಿದ ಜಾರಕಿಹೊಳಿ– ಹೆಬ್ಬಾಳಕರ ಒಳ ಜಗಳ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:58 IST
Last Updated 1 ಸೆಪ್ಟೆಂಬರ್ 2018, 19:58 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ತಾರಕಕ್ಕೇರಿರುವ ಜಾರಕಿಹೊಳಿ (ಸಚಿವ ರಮೇಶ–ಶಾಸಕ ಸತೀಶ) ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳಕರ ನಡುವಿನ ಭಿನ್ನಮತ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲೂ ಪ್ರತಿಧ್ವನಿಸಿದೆ.

ಬೆಳಗಾವಿ ಜಿಲ್ಲಾ ಘಟಕವನ್ನು ಈಗಾಗಲೇ ಇಬ್ಭಾಗ ಮಾಡಿರುವ ಈ ಒಳಜಗಳ, ಕಾಂಗ್ರೆಸ್‌ ಪಾಲಿಗೆ ಮತ್ತೊಮ್ಮೆ ‘ಧರ್ಮ’ ಸಂಕಟವನ್ನೂ ತಂದಿಟ್ಟಿದೆ.

ಪಕ್ಷದ ಬೆಳಗಾವಿ ಘಟಕದಲ್ಲಿರುವ ತಿಕ್ಕಾಟ ಕುರಿತು ಕೆಪಿಸಿಸಿ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆ, ಅಲ್ಲಿಗೆ ಬಂದ ಸಚಿವ ಡಿ.ಕೆ. ಶಿವಕುಮಾರ್‌, ಹೆಬ್ಬಾಳಕರ ಪರ ನಿಂತು ಮಾತನಾಡಿದ್ದು ರಮೇಶ‌ ಅವರನ್ನು ಕೆರಳಿಸಿದೆ. ಈ ಸಭೆಗೆ ಸತೀಶ್ ಜಾರಕಿಹೊಳಿ ಗೈರಾಗಿದ್ದರು.

ADVERTISEMENT

ಈ ಮಧ್ಯೆ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಚಿವ ಶಿವಕುಮಾರ್ ಸಂಧಾನ ಮಾತುಕತೆ ನಡೆಸಿದರು.

ಗುದ್ದಾಟ!: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್‌ ತನಗೆ ಅಥವಾ ಸತೀಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲಗೆ ಕೊಡಿ’ ಎಂದು ರಮೇಶ್ ಜಾರಕಿಹೊಳಿ ಬೇಡಿಕೆ ಮುಂದಿಟ್ಟರು. ಮುಸ್ಲಿಂ ಸಮುದಾಯಕ್ಕೆ ನೀಡುವಂತೆ ಮಾಜಿ ಶಾಸಕ ಫಿರೋಜ್ ಸೇಠ್ ಪಟ್ಟು ಹಿಡಿದದ್ದು, ಇಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ವಾಗ್ವಾದ ಜೋರಾಗುತ್ತಿದ್ದಂತೆ ವೇಣುಗೋಪಾಲ್‌ ಸಭೆ ಮೊಟಕುಗೊಳಿಸಿದರು.

ಸಿದ್ದರಾಮಯ್ಯಗೆ ಆಹ್ವಾನ: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯ ಅವರನ್ನು ಆ ಜಿಲ್ಲೆಯ ಕೈ ನಾಯಕರು ಆಗ್ರಹಿಸಿದರು.

ಸಿದ್ದರಾಮಯ್ಯ ಸಮ್ಮುಖದಲ್ಲೇ ಕೊಪ್ಪಳ ಜಿಲ್ಲೆಯ ನಾಯಕರು ತಮ್ಮ ಇಂಗಿತ ವ್ಯಕ್ತಪಡಿಸಿದ್ದು, ಅದನ್ನು ಅವರು ನಯವಾಗಿ ನಿರಾಕರಿಸಿದ್ದಾರೆ. ‘ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಮಾತಿಗೆ ನಾನು ಬದ್ಧ. ಬೇರೆ ಯಾರನ್ನಾದರೂ ಅಭ್ಯರ್ಥಿಯಾಗಿ ಆಯ್ಕೆ ಮಾಡಿ’ ಎಂದೂ ಸಿದ್ದರಾಮಯ್ಯ ಸಲಹೆ ನೀಡಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರ ಮುಖಂಡರ ಸಭೆಯ ಬಳಿಕ ಮಾತನಾಡಿದ ಕಂಪ್ಲಿ ಶಾಸಕ ಗಣೇಶ, ‘ಜಿಲ್ಲೆಯಲ್ಲಿ ಆರು ಜನ ಶಾಸಕರಿದ್ದೇವೆ. ಈ ಬಾರಿ ಗೆಲ್ಲುವ ವಿಶ್ವಾಸವಿದೆ‘ ಎಂದರು.

ಧರಂಸಿಂಗ್ ಪ್ರತಿನಿಧಿಸುತ್ತಿದ್ದ ಬೀದರ್‌ ಕ್ಷೇತ್ರದಿಂದ ಅವರ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವಂತೆ ಆ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಮನವಿ ಮಾಡಿದರು. ಅಭ್ಯರ್ಥಿ ಸ್ಥಾನಕ್ಕೆ ವಿಜಯಸಿಂಗ್, ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ ಹೆಸರೂ ಪ್ರಸ್ತಾಪವಾಯಿತು.

‘ಭಿನ್ನಾಭಿಪ್ರಾಯ ಸ್ಥಳೀಯ ಮಟ್ಟದ್ದು’

ಬೆಳಗಾವಿ: ‘ಲಕ್ಷ್ಮಿ ಹೆಬ್ಬಾಳಕರ ಜೊತೆಗಿನ ಭಿನ್ನಾಭಿಪ್ರಾಯ ಸ್ಥಳೀಯ ಮಟ್ಟದ್ದು; ಇದರಿಂದ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ’ ಎಂದು ಶಾಸಕ ಸತೀಶ ಜಾರಕಿಹೊಳಿ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

‘ಪೂರ್ವ ನಿರ್ಧಾರಿತ ಕಾರ್ಯಕ್ರಮಗಳಲ್ಲಿ ‍ಪಾಲ್ಗೊಳ್ಳಬೇಕಾಗಿರುವುದರಿಂದ ಬೆಂಗಳೂರಿನಲ್ಲಿ ನಡೆದ ಸಭೆಗೆ ಹಾಜರಾಗಲಿಲ್ಲ’ ಎಂದು ತಿಳಿಸಿದರು.

‘ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರ ಆಯ್ಕೆ ವಿಷಯ ನ್ಯಾಯಾಲಯದೆ. ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮಿ ಅವರನ್ನು ಬದಲಾಯಿಸಲು ನಾನು ಪ್ರಯತ್ನಿಸುತ್ತಿಲ್ಲ. ದೆಹಲಿ ಮಟ್ಟದಲ್ಲಿ ಯಾರು ದೂರು ನೀಡಿದ್ದಾರೆ ಎನ್ನುವುದೂ ಗೊತ್ತಿಲ್ಲ’ ಎಂದರು.

ಪರಮೇಶ್ವರ ಗೈರು

ಸಭೆಯಿಂದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ದೂರ ಉಳಿದದ್ದು ಚರ್ಚೆಗೆ ಗ್ರಾಸವಾಯಿತು. ತಮ್ಮ ಒಡೆತನದ ಸಿದ್ಧಾರ್ಥ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ತರಗತಿ ಆರಂಭಕ್ಕೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಅವರು ತೆರಳಿದರು.

ನಿಷ್ಕ್ರಿಯವಾಗಿರುವ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳನ್ನು ಬದಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಾಗಿ‌ದ್ದಾರೆ. ಪರಮೇಶ್ವರ ಬೆಂಬಲಿಗರೇ ಹೆಚ್ಚಿರುವ ಸಮಿತಿಗಳನ್ನು ಪುನರ್ ರಚಿಸುವ ಪ್ರಯತ್ನಕ್ಕೆ ಕೈ ಹಾಕಿರುವುದರಿಂದ ಪರಮೇಶ್ವರ ಗೈರಾದರು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.