ADVERTISEMENT

'ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ' ಇದೇ ಬಿಜೆಪಿ ಸರ್ಕಾರದ ಧ್ಯೇಯ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 7:32 IST
Last Updated 16 ಜುಲೈ 2022, 7:32 IST
   

ಬೆಂಗಳೂರು:ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿನ ಪ್ರಕರಣದ ತನಿಖೆಯಲ್ಲಿ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಮೃತರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್‌ ಪಕ್ಷ, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

#BJPCorruptionFiles ಟ್ಯಾಗ್ ಬಳಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌,'ಸಂತೋಷ್ ಪಾಟೀಲ್ ಪತ್ರ ಬರೆದು ಬರೆದೂ ಬೇಸತ್ತು ಜೀವ ಬಿಟ್ಟರು, ಈಗ ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 40 ಪರ್ಸೆಂಟ್‌ ಸರ್ಕಾರದ ಆಡಳಿತದಲ್ಲಿ ಸಾಮಾನ್ಯರ ಪತ್ರಗಳಿಗೆ, ನ್ಯಾಯದ ಕೋರಿಕೆಗಳಿಗೆ ಬೆಲೆ ಇದೆಯೇ ಬಸವರಾಜ ಬೊಮ್ಮಾಯಿ ಅವರೇ?ಈಶ್ವರಪ್ಪನವರ ತನಿಖೆ ಏಕಿಲ್ಲ? A1 (ಪ್ರಮುಖ) ಆರೋಪಿಯಾದರೂ ಬಂಧಿಸಲಿಲ್ಲವೇಕೆ?' ಎಂದು ಪ್ರಶ್ನಿಸಿದೆ.

'ಬೊಮ್ಮಾಯಿ ಅವರೇ,ಸಂತೋಷ್ ಪಾಟೀಲ್‌ ಅವರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ?ನಿಮ್ಮ ಮೇಲೆ ವಿಶ್ವಾಸ ಇಲ್ಲದಿರುವುದು ಹಾಗೂ ನಿಮ್ಮ ಸರ್ಕಾರದ ತನಿಖೆಯ ಮೇಲೆ ನಂಬಿಕೆ ಕಳೆದುಹೋಗಿರುವುದು ನಿಮಗಂಟಿದ ಕಳಂಕ ಅಲ್ಲವೇ?ಆರೋಪಿ ಈಶ್ವರಪ್ಪನವರ ರಕ್ಷಣೆಗೆ ಬೇಲಿ ಕಟ್ಟಿ ನಿಂತಿದ್ದಿರಲ್ಲವೇ' ಎಂದು ಇನ್ನೊಂದು ಪ್ರಶ್ನೆ ಹಾಕಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ'ಇದೇ ಬಿಜೆಪಿಸರ್ಕಾರದ ಧ್ಯೇಯ ವಾಕ್ಯ!ತನಿಖೆಗೂ ಮೊದಲೇ ಕೆ.ಎಸ್‌.ಈಶ್ವರಪ್ಪ ಅವರು'ಕೆಲವೇ ದಿನದಲ್ಲಿ ಆರೋಪದಿಂದ ಮುಕ್ತನಾಗುತ್ತೇನೆ' ಎಂದು ವಿಶ್ವಾಸದಿಂದ ಹೇಳಿಕೊಂಡು ತಿರುಗುತ್ತಿದ್ದಾರೆ.'ನ್ಯಾಯ' ಸಮಾಧಿಯಾಗುತ್ತಿರುವುದನ್ನು ಕಂಡು ಸಂತೋಷ್ ಆತ್ಮ ರೋಧಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.