ADVERTISEMENT

ಮನೆ ಹಾನಿಗೆ ₹ 10,000 ಪರಿಹಾರ ಸಾಕೇ?: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2022, 5:53 IST
Last Updated 11 ಜುಲೈ 2022, 5:53 IST
   

ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರದಿಂದಹಾನಿಯಾದ ಮನೆಗಳಿಗೆ ಕೇವಲ ₹ 10,000 ಪರಿಹಾರ ನೀಡಿದರೆ ಸಾಕೇ? ಎಂದು ಸರ್ಕಾರವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್ಪಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಕಳೆದ ವಾರ ವಿಡಿಯೊ ಸಂವಾದ ನಡೆಸಿದ್ದರು.

ಆ ವೇಳೆ, ಮಳೆ ಮತ್ತು ಪ್ರವಾಹದಿಂದ ಜೀವಹಾನಿಯಾದ ಕುಟುಂಬಗಳಿಗೆ ಹಾಗೂ ಮನೆಗಳ ಹಾನಿಗೆ ತಕ್ಷಣವೇ ಪರಿಹಾರ ನೀಡಬೇಕು. ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಬೇಕು. ಮನೆ ಹಾನಿ ಆದವರಿಗೆತಕ್ಷಣವೇ ತಲಾ ₹10 ಸಾವಿರ ತುರ್ತು ಪರಿಹಾರ ನೀಡಬೇಕು ಎಂದುಸೂಚಿಸಿದ್ದರು.

ADVERTISEMENT

ಸಿಎಂ ಹೇಳಿಕೆಉಲ್ಲೇಖಿಸಿರುವ ಕಾಂಗ್ರೆಸ್‌,ರಾಜ್ಯದಲ್ಲಿ ಮಳೆ ಅಬ್ಬರದಿಂದ ಪ್ರವಾಹದ ಸ್ಥಿತಿ ಉಂಟಾಗಿದೆ, ಶೇ 40 ಬಿಜೆಪಿ ಸರ್ಕಾರವು ಕೇಂದ್ರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ? ಕೈಗೊಂಡ ರಕ್ಷಣಾ ಕ್ರಮಗಳೇನು? ಆಶ್ರಯ ಕೇಂದ್ರಗಳನ್ನು ತೆರೆಯದಿರುವುದೇಕೆ? ಮನೆ ಹಾನಿಗೆ ಕೇವಲ ₹10,000 ಪರಿಹಾರ ಸಾಕೇ? ಪ್ರಾಣ ಕಳೆದುಕೊಂಡ ಜನ, ಜಾನುವಾರಿಗೆ ನೀಡಿದ ಪರಿಹಾರವೇನು? ಎಂದು ಕೇಳಿದೆ.

ಬಿಜೆಪಿ ಸರ್ಕಾರ ಈ ಹಿಂದೆಯೂ ಪ್ರವಾಹ ನಿರ್ವಹಣೆಗೆ ಸಮರ್ಪಕ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್‌, '2019ರ ಪ್ರವಾಹ ಸಂದರ್ಭದಲ್ಲಿಸಂಪುಟವೇ ಇರಲಿಲ್ಲ. 2020ರ ಪ್ರವಾಹ ವೇಳೆ ನಾಯಕತ್ವ ಬದಲಾವಣೆಯ ತಿಕ್ಕಾಟ ನಡೆಯುತ್ತಿತ್ತು. 2021ರಲ್ಲಿ ಸಮರ್ಪಕ ಪರಿಹಾರ ನೀಡಲಿಲ್ಲ. ಈಗ ಮತ್ತೊಮ್ಮೆ ರಾಜ್ಯದಲ್ಲಿ ಮಳೆ ಹಾನಿಯಾಗಿದೆ.ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ. ಮುಖ್ಯಮಂತ್ರಿ ಅವರು ಆನಲೈನ್ ಮೀಟಿಂಗ್‌ಗಳಿಗೆ ಸೀಮಿತರಾಗಿದ್ದಾರೆ. ಜನರನ್ನು ಕೇಳುವವರಾರು? ಎಂದು ಮತ್ತೊಂದು ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.