ADVERTISEMENT

ನಿಜ ಕಟೀಲ್ ಅವರೇ, ಇದು ಬಿಜೆಪಿಯವರು ಭಾರತ ಬಿಟ್ಟು ಓಡೊ ಯಾತ್ರೆ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2022, 11:34 IST
Last Updated 6 ಅಕ್ಟೋಬರ್ 2022, 11:34 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್   

ಬೆಂಗಳೂರು:ಕಾಂಗ್ರೆಸ್ ನಡೆಸುತ್ತಿರುವುದು ಭಾರತ್‌ ಜೋಡೊ ಅಲ್ಲ, 'ಭಾರತ ಬಿಟ್ಟು ಓಡೊ ಯಾತ್ರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದರು. ಇದಕ್ಕೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಕಟೀಲ್‌ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‌,'ನಿಜ ಕಟೀಲ್‌ ಅವರೇ, ಬಿಜೆಪಿಗರು ಭಾರತ ಬಿಟ್ಟು ಓಡೊ ಯಾತ್ರೆ...' ಎಂದು ಛೇಡಿಸಿದೆ. ಹಾಗೆಯೇ, 'ಸುಳ್ಯದಲ್ಲಿ ಕಾರು ಬಿಟ್ಟು ಓಡಿ ಹೋಗಿದ್ರಲ್ಲ, ಪ್ರಾಕ್ಟೀಸ್ ಚೆನ್ನಾಗಿ ಆಗಿರಬೇಕಲ್ಲವೇ?' ಎಂದು ತಿವಿದಿದೆ.

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವಭಾರತ್‌ ಜೋಡೊ ಯಾತ್ರೆ ಹಬ್ಬದ ಬಿಡುವಿನ ಬಳಿಕ, ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಕ್ರಾಸ್‌ನಿಂದ ಗುರುವಾರ ಪುನರಾರಂಭಗೊಂಡಿದೆ.

ADVERTISEMENT

ರಾಹುಲ್‌ ಗಾಂಧಿ ಅವರೊಂದಿಗೆ ಅವರ ತಾಯಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಜ್ಜೆ ಹಾಕಿದ್ದಾರೆ.ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌,ಪಕ್ಷದ ರಾಷ್ಟ್ರೀಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ ಸಿಂಗ್‌ ಸುರ್ಜೇವಾಲ, ವೇಣುಗೋಪಾಲ್‌ ಸಾಥ್‌ ನೀಡಿದ್ದಾರೆ.

ಕಾಂಗ್ರೆಸ್‌ ಯಾತ್ರೆ ಕುರಿತು ಟೀಕಾಪ್ರಹಾರ ನಡೆಸಿದ್ದಕಟೀಲ್‌,ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಅದು ಚೇತರಿಕೆ ಕಾಣಲಾರದು ಎಂದು ಮನಗಂಡ ಹಲವು ನಾಯಕರು ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಅವರನ್ನು ಜೋಡಿಸಬೇಕಿದ್ದ ರಾಹುಲ್‌, ಅವರ ತಾತ ವಿಭಜಿಸಿದ್ದ ದೇಶ ಜೋಡಿಸಲು ಹೊರಟಿದ್ದಾರೆ. ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿದಪ್ರಧಾನಿ ನರೇಂದ್ರ ಮೋದಿ ನಿಜವಾಗಲೂ ದೇಶ ಜೋಡಿಸುವ ಕಾರ್ಯ ಮಾಡಿದ್ದಾರೆ.ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಕಾಂಗ್ರೆಸ್‌, ಆಂತರಿಕ ಭಿನ್ನಮತ ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ. ಶಾಶ್ವತವಾಗಿ ಮೂಲೆಗುಂಪಾಗಲಿದೆ ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.