ADVERTISEMENT

ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ: ನಿಲುವಳಿ ಮಂಡಿಸಲು ತೀರ್ಮಾನ

ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 1:22 IST
Last Updated 9 ಮಾರ್ಚ್ 2021, 1:22 IST
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯಿಂದ ಬಡವರು, ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣಕ್ಕೆ ಉಭಯ ಸದನಗಳಲ್ಲಿ ಮಂಗಳವಾರ ನಿಲುವಳಿ ಮಂಡಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶಾಸಕ ಸಂಗಮೇಶ್ವರ ಕುಟುಂಬ ಹಾಗೂ ಅವರ ಬೆಂಬಲಿಗರ ಮೇಲೆ ಕೊಲೆ ಯತ್ನ ಕೇಸು ಹಾಕಲಾಗಿದೆ. ಇದು ಸುಳ್ಳು ಕೇಸು. ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ, ಬಂಧಿಸಬೇಕೆಂಬ ಏಕೈಕ ಉದ್ದೇಶದಿಂದ ಕೇಸು ದಾಖಲು ಮಾಡಿಸಲಾಗಿದೆ.

ADVERTISEMENT

ಸದನದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಸಂಗಮೇಶ್ವರ ಅವರನ್ನು ಒಂದು ವಾರ ಅಮಾನತು ಮಾಡಲಾಗಿದೆ. ಸ್ಫೀಕರ್ ಅವರಿಗೆ ಮನವಿ ಮಾಡಿದರೂ ಅಮಾನತು ಆದೇಶ ವಾಪಸ್ ಪಡೆದಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಪೊಲೀಸ್ ದೌರ್ಜನ್ಯ ಖಂಡಿಸಿ ಇದೇ 13ರಂದು ಶಿವಮೊಗ್ಗ ಚಲೋ ನಡೆಸಲು ಕೂಡಾ ತೀರ್ಮಾನಿಸಲಾಯಿತು. ಎಲ್ಲ ಶಾಸಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು..

ಸಿ.ಡಿ ಪ್ರಕರಣ ಮತ್ತು ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಸಚಿವರಿಂದ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಬಗ್ಗೆಯೂ ಉಭಯ ಸದನದಲ್ಲಿ ಹೋರಾಟ ಮಾಡಲು ಮತ್ತು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕೂಡಾ ಸಭೆಯಲ್ಲಿ‌ ನಿರ್ಣಯ ಕೈಗೊಳ್ಳಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ಹಿರಿಯ ಮುಖಂಡರಾದ ಜಿ. ಪರಮೇಶ್ವರ, ಆರ್.ವಿ. ದೇಶಪಾಂಡೆ, ಕೆ.ಆರ್. ರಮೇಶ್ ಕುಮಾರ್, ಶಾಮನೂರು ಶಿವಶಂಕರಪ್ಪ, ಸಿ.ಎಂ. ಇಬ್ರಾಹಿಂ,ಕೆ.ಜೆ. ಜಾರ್ಜ್, ಕೆಪಿಸಿಸಿಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಧ್ರುನಾರಾಯಣ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.