ADVERTISEMENT

ರಸ್ತೆ ಗುಂಡಿ: ನಾಳೆ ಸಿ.ಎಂ ನಿವಾಸಕ್ಕೆ ಪ್ರತಿಭಟನಾ ರ‍್ಯಾಲಿ

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಕಾಂಗ್ರೆಸ್‌ ಆಗ್ರಹ l ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸುತ್ತೇವೆ ರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 21:01 IST
Last Updated 19 ಅಕ್ಟೋಬರ್ 2022, 21:01 IST
ಹನುಮಂತ ನಗರದ ಕೊಹಿನೂರ್ ಆಟದ ಮೈದಾನದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು. – ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ. (ಎಡಚಿತ್ರ) ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಬಳಿಯ ಸಿಎನ್‌ಆರ್‌ ಅಂಡರ್‌ಪಾಸ್‌ ಮೇಲಿನ ರಸ್ತೆ ಮೇಲಿನ ಮೃತ್ಯುಕೂಪ. –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್
ಹನುಮಂತ ನಗರದ ಕೊಹಿನೂರ್ ಆಟದ ಮೈದಾನದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು. – ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ. (ಎಡಚಿತ್ರ) ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಬಳಿಯ ಸಿಎನ್‌ಆರ್‌ ಅಂಡರ್‌ಪಾಸ್‌ ಮೇಲಿನ ರಸ್ತೆ ಮೇಲಿನ ಮೃತ್ಯುಕೂಪ. –ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್   

ಬೆಂಗಳೂರು: ‘ನಗರದ ರಸ್ತೆ ಗುಂಡಿ ಗಳನ್ನು ಮುಚ್ಚುವಂತೆ ಆಗ್ರಹಿಸಿ ಆನಂದ ರಾವ್ ವೃತ್ತದಿಂದ ಮುಖ್ಯಮಂತ್ರಿ ಮನೆಯ ವರೆಗೂ ಪಕ್ಷದ ವತಿಯಿಂದ ಇದೇ 21ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಶಾಸಕರು, ಮಾಜಿ ಮೇಯರ್‌ಗಳು, ಪಾಲಿಕೆಯ ಮಾಜಿ ಸದಸ್ಯರು ಮೆರವಣಿಗೆಯಲ್ಲಿ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ’ ಎಂದರು.

‌‘ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿವೆ. ಒಂದೂವರೆ ವರ್ಷದಿಂದ ಹೈಕೋರ್ಟ್ ಕೂಡ ‌ಈ ವಿಚಾರವಾಗಿ ಚಾಟಿ ಬೀಸುತ್ತಲೇ ಇದೆ. ರಸ್ತೆ ಗುಂಡಿ ಮುಚ್ಚದಿದ್ದರೆ ಜೈಲಿಗೆ ಹಾಕುವುದಾಗಿಯೂ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದೆ. ನಂತರವೂ ಬೆಂಗಳೂರಿನಲ್ಲಿ ರಸ್ತೆಗುಂಡಿ ಕಡಿಮೆ ಆಗಿಲ್ಲ’ ಎಂದು ದೂರಿದರು.

ADVERTISEMENT

‘ಪಾಲಿಕೆಯ 198 ವಾರ್ಡ್‌ಗಳಿಗೆ 2020-21ರಲ್ಲಿ ಸರ್ಕಾರವು ನಯಾಪೈಸೆ ಅನುದಾನ ಬಿಡುಗಡೆ ಮಾಡಲಿಲ್ಲ. 2022-23ಕ್ಕೆ ಬಜೆಟ್‌ನಲ್ಲಿ ಹೊಸ ವಾರ್ಡ್‌ಗೆ ₹ 6 ಕೋಟಿ, ಹಳೆ ವಾರ್ಡ್‌ಗಳಿಗೆ ₹ 4 ಕೋಟಿ ಘೋಷಿಸಿದ್ದಾರೆ. ಈ ಅನುದಾನ ಕನ್ನಡಿಯೊಳಗಿನ ಗಂಟಿನಂತೆ ಕೇವಲ ಕಾಗದ ಮೇಲೆ ಇದೆಯೇ ಹೊರತು ಹಣ ಬಿಡುಗಡೆ ಆಗಿಲ್ಲ. ಎಂಜಿನಿಯರ್‌ಗಳಿಗೆ ಟೆಂಡರ್ ಕರೆಯಲು ಸರ್ಕಾರ ಇನ್ನೂ ಅನುಮತಿ ನೀಡಿಲ್ಲ’ ಎಂದರು.

‘ಬೆಂಗಳೂರು ಅಭಿವೃದ್ಧಿ ಜವಾಬ್ದಾರಿಯನ್ನು ಮುಖ್ಯ ಮಂತ್ರಿಯವರೇ ಇಟ್ಟುಕೊಂಡಿದ್ದು, ಅವರ ಬೆಂಬಲಕ್ಕೆ ಏಳು ಸಚಿವರೂ ಇದ್ದಾರೆ. ಇನ್ನು ಬಿಡಿಎ ಮುಖ್ಯಸ್ಥರು, ಮುಖ್ಯ ಸಚೇತಕರು ಬೆಂಗಳೂರಿನ ಶಾಸಕರೇ ಆಗಿದ್ದಾರೆ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಲಕ್ಷಗಟ್ಟಲೇ ಗುಂಡಿಗಳು ಬಿದ್ದಿವೆ. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಮಳೆ ಬಿದ್ದು, ರಸ್ತೆ ಗುಂಡಿ ಬೀಳುತ್ತಿದ್ದವು. ತಕ್ಷಣ ಅವುಗಳನ್ನು ಮುಚ್ಚುವ ಕೆಲಸ ಆಗುತ್ತಿತ್ತು’ ಎಂದರು.

ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ‘ಬೆಂಗಳೂರಿನ ರಸ್ತೆಗಳ ಪೈಕಿ ಯಾವುದಾದರೂ ಒಂದು ರಸ್ತೆ ಒಂದು ಕಿ.ಮೀ.ನಷ್ಟು ಗುಂಡಿರಹಿತವಾಗಿ ಇದೆಯೇ ಎಂದು ಕೇಳಿದ್ದೆ. ಅಧಿಕಾರಿಗಳಿಂದ ಇಲ್ಲ ಎಂಬ ಉತ್ತರ ಸಿಕ್ಕಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಗಾರ್ಬೇಜ್ ಸಿಟಿ ಎಂದು ಗುರುತಿಸಲಾಯಿತು. ನಂತರ ನೆರೆ ನಗರವಾಯಿತು. ಈಗ ಡೆತ್ ಹೋಲ್ ಸಿಟಿ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಬಗ್ಗೆ ಮಾತನಾಡುತ್ತಿದ್ದು, ನಾವು 70 ವರ್ಷಗಳ ಕಾಲ ಬೆಂಗಳೂರಿಗೆ ತಂದಿದ್ದ ಬ್ರ್ಯಾಂಡ್ ಅನ್ನು ಬಿಜೆಪಿ ಸರ್ಕಾರ ಕೆಳಗೆ ತರುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.