ADVERTISEMENT

ಖಾಸಗಿ ಬಡಾವಣೆ ಅನುಮೋದನೆಗೆ ಸಮ್ಮತಿ ಅಗತ್ಯ: ಸಚಿವ ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 15:58 IST
Last Updated 3 ಮಾರ್ಚ್ 2025, 15:58 IST
ಬೈರತಿ ಸುರೇಶ್
ಬೈರತಿ ಸುರೇಶ್   

ಬೆಂಗಳೂರು: ‘ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವ ಮೊದಲು ಸರ್ಕಾರದಿಂದ ಸಮ್ಮತಿ ಪಡೆಯಬೇಕು’ ಎಂದು ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೂಚಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಯೋಜನಾ ಪ್ರಾಧಿಕಾರಗಳ ಪ್ರಗತಿ ಪರಿಶೀಲನೆಯನ್ನು ಸೋಮವಾರ ನಡೆಸಿದ ಅವರು, ‘ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುವುದಾದರೆ, ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಈ ಕೆಲಸ ಯಾಕೆ ಆಗುವುದಿಲ್ಲ’ ಎಂದು ಪ್ರಶ್ನಿಸಿದರು.

‘ಪ್ರಾಧಿಕಾರಗಳು ಬಡಾವಣೆಗಳನ್ನು ನಿರ್ಮಿಸಿ ಕೈಗೆಟುಕುವ ದರದಲ್ಲಿ ಜನಸಾಮಾನ್ಯರಿಗೆ ನಿವೇಶನಗಳು ಸಿಗುವಂತಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ‌ ರಚಿಸಲಾಗಿದೆ. ರೈತರ ಮನವೊಲಿಸಿ 50:50 ಅನುಪಾತದಲ್ಲಿ ಜಮೀನು ಅಭಿವೃದ್ಧಿ‌ಪಡಿಸಿ, ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡುವುದು ಪ್ರಾಧಿಕಾರಗಳ ಕೆಲಸ. ಖಾಸಗಿ ಬಡಾವಣೆಗಳ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡುವುದಷ್ಟೆ ಅಲ್ಲ’ ಎಂದು ಖಾರವಾಗಿ ಹೇಳಿದರು.

ADVERTISEMENT

‘ಖಾಸಗಿಯಾಗಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಬಡಾವಣೆ ನಿರ್ಮಾಣಕ್ಕೆ ಬೇರೆ ಬೇರೆ ನಿಯಮಗಳಿವೆ. ಎರಡಕ್ಕೂ ಅನ್ವಯವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಸಚಿವರು ಸೂಚಿಸಿದರು.

‘ಜಮೀನು ಕೊಡಲು ಮುಂದೆ ಬರುವ ರೈತರನ್ನು ಸಂಪರ್ಕಿಸಬೇಕು ಅಥವಾ ರೈತರ ಮನವೊಲಿಸಿ ಜಮೀನು ಪಡೆಯಬೇಕು. ಇದು ಸಾಧ್ಯವಾಗದ ಸಂದರ್ಭದಲ್ಲಿ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶವಿದೆ. ಈ ದಾರಿಗಳನ್ನು ಬಳಸಿಕೊಂಡು ಬಡಾವಣೆಗಳನ್ನು ನಿರ್ಮಿಸಬೇಕು. ಪ್ರಾಧಿಕಾರಗಳಲ್ಲಿ ಹೆಚ್ಚಿನ ಹಣವಿದೆ ಎಂದು ಬ್ಯಾಂಕುಗಳಲ್ಲಿ ಠೇವಣಿ ಇಡಬಾರದು. ಆ ಮೊತ್ತದಲ್ಲಿ ಬಡಾವಣೆಗಳನ್ನು ನಿರ್ಮಿಸಬೇಕು’ ಎಂದು ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ಎನ್.‌ ವೆಂಕಟಾಚಲಪತಿ, ನಿರ್ದೇಶಕ ತಿಪ್ಪೇಸ್ವಾಮಿ, ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು, ನಗರ ಯೋಜಕ ಸದಸ್ಯರು, ಕಾರ್ಯದರ್ಶಿಗಳು ಸಭೆಯಲ್ಲಿದ್ದರು.

‘ಪ್ರಾಧಿಕಾರಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ’
‘ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಅನ್ವಯ ಖಾಸಗಿ ಬಡಾವಣೆಗಳಲ್ಲಿಯೂ ನಾಗರಿಕ ಸೌಲಭ್ಯ (ಸಿಎ) ನಿವೇಶನ ಮೀಸಲು ಒಳಚರಂಡಿ ವ್ಯವಸ್ಥೆ ಉದ್ಯಾನವನ ರಸ್ತೆಗಳ ನಿರ್ಮಾಣಕ್ಕೆ ನಿಯಮ ರೂಪಿಸಲು ಸಾಧ್ಯವಿದೆ’ ಎಂದು ಬೈರತಿ ಸುರೇಶ್‌ ಹೇಳಿದರು. ‘ನಗರಾಭಿವೃದ್ಧಿ ಪ್ರಾಧಿಕಾರಗಳು ನಗರ ಯೋಜನಾ ಪ್ರಾಧಿಕಾರಗಳ ವತಿಯಿಂದ ಬಡಾವಣೆಗಳು ನಿರ್ಮಾಣವಾದರೆ ಆ ಜಮೀನುಗಳ ನಕ್ಷೆ ಕಾನೂನು ರೀತಿಯಲ್ಲಿರುತ್ತದೆ. ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸಿ ಸಾವಿರಾರು ನಿವೇಶನಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವಾಗ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರಿಂದ ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.