ADVERTISEMENT

ಪಠ್ಯಪುಸ್ತಕಗಳನ್ನು 'ಪಕ್ಷಪುಸ್ತಕ'ಗಳನ್ನಾಗಿಸುವ ಹುನ್ನಾರ: ಎಚ್‌ಡಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಮೇ 2022, 8:38 IST
Last Updated 17 ಮೇ 2022, 8:38 IST
   

ಬೆಂಗಳೂರು: ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್‌ ಹೆಡಗೇವಾರ್‌ ಅವರ ಭಾಷಣ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರ್ಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ʼಆಪರೇಷನ್‌ ಕಮಲʼದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ʼಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರುʼ ಇನ್ನೇನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.

ಮಹಾನ್‌ ರಾಷ್ಟ್ರಪ್ರೇಮಿ, ಬ್ರಿಟೀಷರಿಗೆ ಸಿಂಹಸ್ವಪ್ನ, ಭಾರತಮಾತೆಯ ಹೆಮ್ಮೆಯ ಪುತ್ರ ಸರ್ದಾರ್‌ ಭಗತ್‌ ಸಿಂಗ್‌ ಅವರ ಪಠ್ಯಕ್ಕೆ ಕೊಕ್‌ ಕೊಟ್ಟು, ಆರೆಸ್ಸೆಸ್‌ ಸಂಸ್ಥಾಪಕ ಹೆಡಗೇವಾರ್‌ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ಮತ್ತವರ ಪಟಾಲಂ ವಿಕೃತಿಗೆ ಇದು ಪರಾಕಾಷ್ಠೆ. ಭಗತ್‌ ಸಿಂಗ್‌ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದರು. ಸಂಘ ಪರಿವಾರಿಗಳು ಅದೇ ಬ್ರಿಟೀಷರಿಗೆ ಪರಿಚಾರಿಕೆ ಮಾಡಿಕೊಂಡು ಸ್ವಾತಂತ್ರ್ಯಕ್ಕಿಂತ ಗುಲಾಮಗಿರಿಯೇ ಲೇಸೆಂದುಕೊಂಡಿದ್ದರು. ಇಂಥವರು, ಭಗತ್‌ ಸಿಂಗ್‌ರಂಥ ರಾಷ್ಟ್ರಪ್ರೇಮಿಗಳನ್ನು ಸಹಿಸಿಕೊಳ್ಳುತ್ತಾರೆಯೇ? ಎಂದಿದ್ದಾರೆ.

ADVERTISEMENT

ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಚಾರಿತ್ರ್ಯಹೀನತೆಯೇ ಮೈವೇತ್ತ ಬಿಜೆಪಿಗೆ ರಾಜ್ಯದ ಬೆಳವಣಿಗೆಯಲ್ಲಿ ನಂಬಿಕೆ ಇಲ್ಲ. ಹಿಜಾಬ್‌, ಆಹಾರ, ವ್ಯಾಪಾರ, ಹಲಾಲ್‌ ಎಲ್ಲಾ ಆಯಿತು. ಈಗ ಪಠ್ಯಕ್ಕೆ ನೇತಾಡುತ್ತಿದೆ. ಅಭಿವೃದ್ಧಿ ಎಂದರೆ ಆ ಪಕ್ಷಕ್ಕೆ ಅಪಥ್ಯ.ಬಿಜೆಪಿಗರು ಮತ್ತು ಬ್ರಿಟೀಷರು ಇಬ್ಬರೂ ಒಂದೇ. ಒಡೆದು ಆಳುವುದೇ ಇವರ ನೀತಿ ಮತ್ತು ಧರ್ಮ. ಬ್ರಿಟೀಷ್‌ ಪರಂಪರೆಯನ್ನು ಬಿಜೆಪಿಗರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೂ ಮುಂದುವರಿಸಿದ್ದಾರೆ. ಜನರ ಸ್ವಾತಂತ್ರ್ಯವನ್ನು ಸಹಿಸಲು ಅವರಿಗೆ ಆಗುತ್ತಿಲ್ಲ. ಪಠ್ಯವನ್ನು ವಿಕೃತಿಗೊಳಿಸುತ್ತಿರುವುದು ಎಂದರೆ, ಕನ್ನಡ ಆಸ್ಮಿತೆಯನ್ನು ಹತ್ತಿಕ್ಕುವ ಪಾತಕ ಯತ್ನ. ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು, ಪ್ರಶ್ನಿಸಬೇಕು. ಹೋರಾಟಕ್ಕೂ ಇಳಿಯಬೇಕು."ಅಯ್ಯೋ.. ಕರ್ನಾಟಕ ಕಟುಕರಕೈಯಲ್ಲಿ ಸಿಕ್ಕಿಕೊಂಡಿದೆ!!" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.