
ನವದೆಹಲಿ: ಹೆಚ್ಚಿನ ವೆಚ್ಚ, ಭೂಸ್ವಾಧೀನ ಅಡೆತಡೆಗಳು ಮತ್ತು ಕುಗ್ಗುತ್ತಿರುವ ನದಿ ಹರಿವಿನಿಂದಾಗಿ ಹೊಸ ಅಣೆಕಟ್ಟುಗಳ ನಿರ್ಮಾಣ ಇನ್ನು ಮುಂದೆ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ಶುಕ್ರವಾರ ಇಲ್ಲಿ ಜರುಗಿದ ಜಲಶಕ್ತಿ ಸಚಿವಾಲಯದ ಎರಡು ದಿನಗಳ ಶೃಂಗಸಭೆ ಉದ್ಘಾಟಿಸಿದ ಅವರು, ‘ಕೇಂದ್ರ ಮತ್ತು ರಾಜ್ಯಗಳು ದೊಡ್ಡ ಪ್ರಮಾಣದ ನೀರಿನ ಸಂರಕ್ಷಣೆ, ಸಮುದಾಯ ಭಾಗವಹಿಸುವಿಕೆ ಮತ್ತು ಅಂತರ್ಜಲ ಮರುಪೂರಣಕ್ಕೆ ಕೈಜೋಡಿಸಬೇಕು‘ ಎಂದು ಸಲಹೆ ನೀಡಿದರು.
‘ದೇಶದಲ್ಲಿ 6,500ಕ್ಕೂ ಹೆಚ್ಚು ಅಣೆಕಟ್ಟುಗಳಿವೆ. ಆದರೆ, ನಾವು 750 ಬಿಸಿಎಂ ನೀರನ್ನು ಮಾತ್ರ ಸಂಗ್ರಹಿಸುತ್ತೇವೆ. ಅಣೆಕಟ್ಟು ನಿರ್ಮಿಸಲು 25 ವರ್ಷಗಳು ಬೇಕಾಗುತ್ತದೆ. ₹25,000 ಕೋಟಿ ವೆಚ್ಚವಾಗುತ್ತದೆ. ನಮಗೆ ಅಷ್ಟೊಂದು ಸಮಯವಿದೆಯೇ? ನಮ್ಮಲ್ಲಿ ಅಷ್ಟೊಂದು ಹಣವಿದೆಯೇ?‘ ಎಂದು ಅವರು ಕೇಳಿದರು.
ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ‘ಕರ್ನಾಟಕದ ನಾರಾಯಣಪುರ ಎಡದಂಡೆ ಕಾಲುವೆಯು ಏಷ್ಯಾದ ಮೊಟ್ಟಮೊದಲ ಸಂಪೂರ್ಣ ಸ್ವಯಂಚಾಲಿತ ನೀರಾವರಿ ಯೋಜನೆ. ಇಲ್ಲಿ ಸ್ಕಾಡಾ ತಂತ್ರಜ್ಞಾನ ಬಳಸಿ ನೀರಿನ ಮಿತವ್ಯಯ ಮಾಡಲಾಗಿದೆ ಹಾಗೂ ಕಟ್ಟ ಕಡೆಯ ಹಂತದ ವರೆಗೂ ನೀರಿನ ಯಶಸ್ವಿ ಹಂಚಿಕೆ ಮಾಡಲಾಗಿದೆ‘ ಎಂದರು. ಕಲ್ಲಿನ ಪ್ರದೇಶದಲ್ಲೂ ತಂತ್ರಜ್ಞಾನ ಬಳಸಿ ನೀರಿನ ಸಂರಕ್ಷಣೆ ಮಾಡಬಹುದು ಎಂಬುದನ್ನು ಐಹೊಳೆ ದೇವಸ್ಥಾನದಲ್ಲಿ ಸಾಬೀತುಪಡಿಸಲಾಗಿದೆ ಎಂದರು.
‘ಸ್ವಚ್ಛ ಭಾರತ್ (ಗ್ರಾಮೀಣ) ಎರಡನೇ ಹಂತದಲ್ಲಿ ಬೂದು ನೀರಿನ ನಿರ್ವಹಣೆ ಯೋಜನೆಯಲ್ಲಿ ಶೇ 91ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಿಂದಾಗಿ, ನೀರಿನ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿ ಆಗಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.