ADVERTISEMENT

ಕುಕ್ಕರ್ ಬಾಂಬ್‌ ಸ್ಫೋಟ: ದೇವಸ್ಥಾನ ಗುರಿ?

ಚರ್ಚೆಗೆ ಗ್ರಾಸವಾದ ‘ಇನ್‌ಸ್ಟಾಗ್ರಾಂ ಪೋಸ್ಟ್’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 20:29 IST
Last Updated 24 ನವೆಂಬರ್ 2022, 20:29 IST
ಕುಕ್ಕರ್ ಬಾಂಬ್‌ ಸ್ಫೋಟ
ಕುಕ್ಕರ್ ಬಾಂಬ್‌ ಸ್ಫೋಟ   

ಮಂಗಳೂರು: ನಗರದ ನಾಗುರಿ ಬಳಿ ನ.19ರಂದು ಆಟೊರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟವನ್ನು ತಾವೇ ಮಾಡಿದ್ದಾಗಿ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ (ಐಆರ್‌ಸಿ) ಹೆಸರಲ್ಲಿ ಇನ್‌ಸ್ಟಾ ಗ್ರಾಂನಲ್ಲಿ ಆಗಿದೆ ಎನ್ನಲಾದ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.

ಈ ಪೋಸ್ಟ್‌ನಲ್ಲಿ ‘ನಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು. ಆದರೆ, ಬಾಂಬ್ ಅಲ್ಲಿಗೆ ತಲುಪುವ ಮೊದಲೇ ಬ್ಲಾಸ್ಟ್ ಆಗಿತ್ತು’ ಎಂಬ ಉಲ್ಲೇಖದ ಜತೆಗೆ, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಕುರಿತಾಗಿ, ‘ನಿಮ್ಮ ಸಂಭ್ರಮ ಕ್ಷಣಿಕವಾದದ್ದು. ತಕ್ಕ ಪರಿಣಾಮ ಸದ್ಯದಲ್ಲೇ ಎದುರಿಸಲಿದ್ದೀರಿ’ ಎಂದು ಎಚ್ಚರಿಕೆ ನೀಡಿದೆ. ಮೊದಲು ಉರ್ದು ಭಾಷೆಯಲ್ಲಿ ನಂತರ, ಇಂಗ್ಲಿಷ್‌ನಲ್ಲಿ ಬರಹ ಇದೆ.

ಇದರ ಬೆನ್ನಲ್ಲೇ ಪೊಲೀಸರು ನಗರದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ ಹಾಗೂ ಇತ್ತೀಚೆಗೆ ಸಂಘ ಪರಿವಾರದ ಸಂಘಟನೆಗಳು ಕನ್ನಡ ಹಬ್ಬ ಆಯೋಜಿಸಿದ್ದ ‘ಸಂಘ ನಿಕೇತನ’ ಆರ್‌ಎಸ್‌ಎಸ್ ಕಚೇರಿಯ ಮೇಲೆ ವಿಶೇಷ ನಿಗಾವಹಿಸಿದ್ದಾರೆ.

ADVERTISEMENT

ಕದ್ರಿ ದೇವಸ್ಥಾನಕ್ಕೆ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಗುರುವಾರ ಭೇಟಿ ನೀಡಿ ತಪಾಸಣೆ ನಡೆಸಿದರು. ‘ಈ ಸಂಘಟನೆಯ ಹೆಸರು ಕೇಳಿಲ್ಲ. ಇದು ನಕಲಿ ಪೋಸ್ಟ್ ಆಗಿರುವ ಸಾಧ್ಯತೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ನಡುವೆ ಕಳೆದ ಒಂದು ವಾರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 2–3 ಕಡೆಗಳಲ್ಲಿ ಸೆಟ್‌ಲೈಟ್ ಫೋನ್ ಸದ್ದು ಮಾಡಿದೆ ಎಂಬ ಬಗ್ಗೆ ಕೂಡ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಶಾರಿಕ್ ಆರೋಗ್ಯದಲ್ಲಿ ಚೇತರಿಕೆ: ಸ್ಫೋಟದ ಆರೋಪಿ ಶಾರಿಕ್‌ಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೇ 45ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆತನ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

‘ಮಾಹಿತಿ ಹಂಚಿಕೆಗೆ ಆ್ಯಪ್‌’

ಮಂಗಳೂರಿನ ಗೋಡೆ ಬರಹದ ಆರೋಪಿಗಳಾದ ತೀರ್ಥಹಳ್ಳಿಯ ಅರಾಫತ್ ಅಲಿ, ಅಬ್ದುಲ್ ಮತೀನ್‌, ನಾಗುರಿ ಸಮೀಪ ನಡೆದ ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣದ ಮಾಸ್ಟರ್‌ ಮೈಂಡ್ ಎನ್ನಲಾಗಿದೆ. ಅರಾಫತ್‌ ಅಲಿ, ಅಬ್ದುಲ್ ಮತೀನ್, ಶಾರೀಕ್ ಹಾಗೂ ನ್ಯಾಯಾಂಗ ಬಂಧನದಲ್ಲಿರುವ ಮಾಝ್‌ ಇವರು ಡಾರ್ಕ್‌ವೆಬ್‌, ಸಿಗ್ನಲ್, ಟೆಲಿಗ್ರಾಂ ಆ್ಯಪ್‌ಗಳನ್ನು ವಿಡಿಯೊ ಮತ್ತು ಮಾಹಿತಿ ಹಂಚಿಕೆಗೆ ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಶಾರಿಕ್‌ ಬಳಿ ಸಿಕ್ಕ ಮೊಬೈಲ್‌ನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆತ ಈ ಮೊದಲು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಮಣ್ಣಗುಡ್ಡೆ ಸುತ್ತಮುತ್ತ ಓಡಾಡಿರುವುದನ್ನು ಮೊಬೈಲ್‌ ಸಿಗ್ನಲ್ ಮೂಲಕ ಪೊಲೀಸರು ಪತ್ತೆ ಮಾಡಿದ್ದಾರೆ. ತನ್ನ ಬಗ್ಗೆ ಅನುಮಾನ ಬರಬಾರದೆಂದು ಶಾರಿಕ್ ಹೆಗಲಿಗೆ ಕೇಸರಿ ಶಾಲು ಕೂಡ ಹಾಕಿಕೊಳ್ಳುತ್ತಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಎನ್‌ಐಎಗೆ ಹಸ್ತಾಂತರ’

ಮಂಗಳೂರು ಕಂಕನಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಗುರಿ ಬಳಿ ನಡೆದ ಆಟೊರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾಯಿಸಿದೆ.

‘ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ, ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ, ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು, ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ತನಿಖೆಯನ್ನು ನಡೆಸಲು ಶಿಫಾರಸು ಮಾಡಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.