ADVERTISEMENT

ಕೋವಿಡ್-19 ಹಿನ್ನೆಲೆ: ಇಟಲಿಯಲ್ಲೇ ಉಳಿಯಲು ನಿರ್ಧರಿಸಿದ ಶಿರಸಿಯ ಯುವತಿ

ಪ್ರತಿಭಾ ಕಾರ್ಯಕ್ಕೆ ಅಪಾರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 15:11 IST
Last Updated 24 ಮಾರ್ಚ್ 2020, 15:11 IST
ಪ್ರತಿಭಾ ಹೆಗಡೆ
ಪ್ರತಿಭಾ ಹೆಗಡೆ   

ಶಿರಸಿ: ಕೊರೊನಾ ವೈರಸ್ ಹರಡುವ ಭೀತಿಯಿಂದ ವಿದೇಶದಲ್ಲಿ ನೆಲೆಸಿರುವ ಸಹಸ್ರಾರು ಜನರು ತಾಯ್ನಾಡಿಗೆ ಮರಳಿದ್ದಾರೆ. ಆದರೆ, ತಾಲ್ಲೂಕಿನ ಯುವತಿಯೊಬ್ಬರು, ತನ್ನಿಂದಾಗಿ ಊರಿಗೆ ಸೋಂಕು ಬರಬಾರದೆಂಬ ಉದ್ದೇಶದಿಂದ ವಿದೇಶದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ತಾಲ್ಲೂಕಿನ ದಂಟ್ಕಲ್‌ನ ಪ್ರತಿಭಾ ಹೆಗಡೆ ಅವರು, ಇಟಲಿ ನೇಪಲ್ಸ್‌ ನಗರದ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಮಾಡುತ್ತಿದ್ದಾರೆ. ಇಟಲಿಯ ಪ್ರಸ್ತುತ ಸ್ಥಿತಿಯನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ತಮ್ಮ ನಿರ್ಧಾರವನ್ನು ಅಲ್ಲಿ ಪ್ರಕಟಿಸುವ ಮೂಲಕ ಸಹಸ್ರಾರು ಜನರ ಮೆಚ್ಚುಗೆ ಗಳಿಸಿದ್ದಾರೆ.

‘ನಾನು ಇಟಲಿಯ ನೇಪಲ್ಸ್ ನಗರದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿದ್ದೇನೆ. ಒಂದೆರಡು ವಾರಗಳಿಂದ ಭಾರತದಲ್ಲಿರುವ ನನ್ನ ಸ್ನೇಹಿತರು, ಕುಟುಂಬದವರು ಮನೆಗೆ ವಾಪಸ್ ಬರುವಂತೆ ಸಲಹೆ ನೀಡಿದರು. ಆದರೆ, ನಾನು ಇಲ್ಲೇ ಇರಲು ನಿರ್ಧರಿಸಿದ್ದೇನೆ. ಕಾರಣ ಸಿಂಪಲ್, ನನ್ನ ನಗರದಲ್ಲಿ ಎಷ್ಟೇ ಜನರಿಗೆ ಕೋವಿಡ್-19 ಬಂದಿರಲಿ, ನಾನು ಮನೆಯಲ್ಲೇ ಇದ್ದರೆ ಏನೂ ಆಗುವುದಿಲ್ಲ. ಬದಲಾಗಿ ಭಾರತಕ್ಕೆ ಬರುವ ಹಾದಿಯಲ್ಲಿ ಎಷ್ಟೋ ಜನರ ನಡುವೆ ಇದ್ದು ಸುಮಾರು 15 ಗಂಟೆಗಳ ಪ್ರಯಾಣ ಮಾಡಬೇಕು. ಭಾರತಕ್ಕೆ ಕೊರೊನಾ ಹೊತ್ತೊಯ್ಯುವದು ಬಿಟ್ಟರೆ ಬೇರೆ ಯಾವ ಉಪಯೋಗವು ಅದರಲ್ಲಿ ಇಲ್ಲ’ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

‘ಈಗ ಭಾರತದ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜನರೂ ನನ್ನ ಪರಿಸ್ಥಿತಿಯಲ್ಲಿಯೇ ಇದ್ದೀರಿ. ಇದ್ದಲ್ಲೇ ಇರುವುದು ಬಿಟ್ಟು ಬಸ್, ರೈಲು ಹತ್ತಿ ಮನೆಗೆ ಹೋಗವುದರಿಂದ ನಿಮಗೆ ಕೊರೊನಾ ವೈರಸ್ ತಾಗುವ ಅಥವಾ ಮೊದಲೇ ಇದ್ದರೆ ಸಹಪ್ರಯಾಣಿಕರಿಗೂ, ಕುಟುಂಬದವರಿಗೂ ತಗುಲುವ ಸಾಧ್ಯತೆಗಳೇ ಹೆಚ್ಚು. ಸರ್ಕಾರ ಬಸ್‌ಗಳನ್ನು ಬಂದ್ ಮಾಡಿದರೂ ಕಷ್ಟಪಟ್ಟು ಇನ್ಯಾವುದೋ ರೀತಿಯಲ್ಲಿ ಮನೆ ಸೇರುವ ಅವಿವೇಕ ತೋರಬೇಡಿ. ದಯವಿಟ್ಟು ಇದ್ದಲ್ಲಿಯೇ ಇರಿ. ಮನೆ ಒಳಗೇ ಇರಿ’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.