ADVERTISEMENT

ಸಿ.ಎಂ ಮನೆ ಸಮೀಪವೇ 'ಕೋವಿಡ್' ಪೀಡಿತರ ಓಡಾಟ, ಆತಂಕ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 20:55 IST
Last Updated 28 ಮಾರ್ಚ್ 2020, 20:55 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ನಿನ್ನೆಯಷ್ಟೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ‘ಕೋವಿಡ್–19’ ರೋಗಿಗಳ ಪಟ್ಟಿಯಲ್ಲಿದ್ದ ಎ59 ಹಾಗೂ ಎ 25 ರೋಗಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆ ಸಮೀಪದಲ್ಲೇ ಓಡಾಡಿದ್ದ ಸಂಗತಿ ಆತಂಕಕ್ಕೆ ಕಾರಣವಾಗಿದೆ.

ವಿದೇಶದಿಂದ ಮರಳಿದ್ದ ಪಿ25 ರೋಗಿಯ ಜೊತೆಗೆ, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೂ (‍ಪಿ59) ಸೋಂಕು ತಗುಲಿರುವುದು ಶುಕ್ರವಾರವಷ್ಟೇ ದೃಢಪಟ್ಟಿದೆ. ಈಗ ಇಬ್ಬರಿಗೂ ನಗರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರವೇ ಹೇಳಿದೆ.

ಇದರ ಬೆನ್ನಲ್ಲೇ ಅವರಿಬ್ಬರು ಡಾಲರ್ಸ್ ಕಾಲೊನಿಯಲ್ಲಿರುವ ಸಿ.ಎಂ ಮನೆ ಸಮೀಪದಲ್ಲೇ ಓಡಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಬಿಬಿಎಂಪಿ ಜಂಟಿ ಆಯುಕ್ತರಾದ ಪಲ್ಲವಿ ಹಾಗೂ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

‘ಉತ್ತರ ಕರ್ನಾಟಕದ ಮಹಿಳೆ, ಮುಖ್ಯಮಂತ್ರಿ ಅವರ ಮನೆ ಸಮೀಪದಲ್ಲೇ ಇದ್ದ ನಾಲ್ಕು ಮನೆಗಳಿಗೆ ನಿತ್ಯವೂ ಕೆಲಸಕ್ಕೆ ಹೋಗುತ್ತಿದ್ದರು. ಆ ಪೈಕಿ ಒಂದು ಮನೆ ಪಿ25 ರೋಗಿಗೆ ಸೇರಿದ್ದು. ಅವರಿಂದಲೇ ಮಹಿಳೆಗೂ ಇದೀಗ ಸೋಂಕು ತಗುಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಮಗಳು ಸೇರಿ ನಾಲ್ವರನ್ನು ಈಗಾಗಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಮಹಿಳೆ ಕೆಲಸ ಮಾಡುತ್ತಿದ್ದ ಮನೆಯವರಿಗೂ ಗೃಹ ಬಂಧನ ವಿಧಿಸಲಾಗಿದೆ. ಈ ಪ್ರದೇಶದಲ್ಲಿ ಬೇರೆಯವರ ಓಡಾಟವನ್ನು ನಿರ್ಬಂಧಿಸಲಾಗಿದೆ’ ಎಂದರು.‌

ಸಿ.ಎಂ. ಮನೆಯ ಎದುರು ಮನೆಯಲ್ಲೂ ಕೆಲಸ: ‘ಮುಖ್ಯಮಂತ್ರಿ ಅವರ ಮನೆಯ ಎದುರಿನ ಮನೆಯಲ್ಲೂ ಮಹಿಳೆ ಕೆಲಸ ಮಾಡುತ್ತಿದ್ದಳು. ಜೊತೆಗೆ, ಸಮೀಪದ ಮೂರು ಮನೆಗಳಿಗೂ ಆಕೆಯೇ ಕೆಲಸದವಳಾಗಿದ್ದಳು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಿ.ಎಂ ಮನೆ ಎದುರೇ ರೋಗಿಗಳು ಓಡಾಡಿದ್ದ ಸಂಗತಿ ಗೊತ್ತಾಗುತ್ತಿದ್ದಂತೆ ಎಲ್ಲರೂ ಆತಂಕಗೊಂಡಿದ್ದಾರೆ. ಸ್ಥಳದಲ್ಲಿ ಕೈಗೊಳ್ಳಬೇಕಾ ಮುಂಜಾಗ್ರತಾ ಕ್ರಮಗಳನ್ನುಈಗಾಗಲೇ ಕೈಗೊಳ್ಳಲಾಗಿದೆ. ಹೀಗಾಗಿ, ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದು ಮೂಲಗಳು ಹೇಳಿವೆ.

ತಮ್ಮೂರಿಗೆ ಹೋದ ಜನ; ಮತ್ತಷ್ಟು ಆತಂಕ: ‘ಡಾಲರ್ಸ್ ಕಾಲೊನಿಗೆ ಹೊಂದಿಕೊಂಡಿರುವ ಪ್ರದೇಶವೊಂದರಲ್ಲಿ ಮನೆಗೆಲಸದ ಮಹಿಳೆ ತಮ್ಮ ಕುಟುಂಬದ ಜೊತೆ ಉಳಿದುಕೊಂಡಿದ್ದರು. ಅದೇ ಪ್ರದೇಶದಲ್ಲಿ ಉತ್ತರ ಕರ್ನಾಟಕದ ಯಾದಗಿರಿ ಸೇರಿ ಹಲವು ಜಿಲ್ಲೆಯ 60ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದವು. ಆ ಪೈಕಿ ಹಲವು ಕುಟುಂಬಗಳು ಈಗಾಗಲೇ ತಮ್ಮೂರಿಗೆ ಹೋಗಿವೆ. ಅವರ ವಿಳಾಸವನ್ನು ಪತ್ತೆ ಮಾಡಿ ಆಯಾ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಸರ್ವಪಕ್ಷ ಸಭೆ ಇಂದು
ಬೆಂಗಳೂರು:
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸರ್ವಪಕ್ಷಗಳ ಮುಖಂಡರ ಸಭೆಯನ್ನು ಭಾನುವಾರ (ಮಾ. 29) ಕರೆದಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ಆಯೋಜಿಸಲಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎಲ್ಲ ಪಕ್ಷಗಳ ನಾಯಕರಿಂದ ಸಲಹೆ, ಸೂಚನೆಗಳನ್ನು ಪಡೆದು, ಮುಂದಿನ ಹೆಜ್ಜೆ ಇಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.