ADVERTISEMENT

ಶಾಸಕರ ಅನುದಾನ ಬಳಕೆಗೆ ಸರ್ಕಾರದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 21:03 IST
Last Updated 3 ಏಪ್ರಿಲ್ 2020, 21:03 IST
   

ಬೆಂಗಳೂರು: ಆತಂಕಕಾರಿ ಕೋವಿಡ್‌–19 ವೈರಾಣು ನಿಯಂತ್ರಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯ ಪರಿಷ್ಕತ ಮಾರ್ಗಸೂಚಿ ಅನ್ವಯ ಪ್ರಕೃತಿ ವಿಕೋಪದಡಿ ಶಾಸಕರ ಸ್ಥಳೀಯ ಕ್ವೇತ್ರಾಭಿವೃದ್ಧಿ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿರುವುದರಿಂದ ಕೊರೊನಾ ವೈರಸ್‌ ತಡೆಯಲು 2020–21ನೇ ಸಾಲಿನಲ್ಲಿ ಮಾತ್ರ ಈ ಅನುದಾನ ಬಳಸಲು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಶಾಸಕರು ಬಯಸಿದರೆ ತಮ್ಮ ಅನುದಾನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ADVERTISEMENT

ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಸಕರನ್ನು ಸಂಪರ್ಕಿಸಿ, ಅವರ ಪ್ರಸ್ತಾವನೆಗಳಿಗೆ ತುರ್ತು ಲಭ್ಯವಿರುವ ಪಿ.ಡಿ ಖಾತೆಯ ಹಣದಿಂದ ₹2 ಕೋಟಿಗೆ ಸೀಮಿತಗೊಳಿಸಿ ಬಳಸಲು ಕ್ರಮ ಕೈಗೊಳ್ಳಬಹುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

2018–19ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರಿಗೆ ₹481.69 ಕೋಟಿ ಬಿಡುಗಡೆ ಆಗಿದೆ. 2019– 20ನೇ ಸಾಲಿನಲ್ಲಿ ₹ 299.67 ಕೋಟಿ ಇದೆ. ಅನೇಕ ಶಾಸಕರು ತಮ್ಮ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದ ಕಾರಣದಿಂದ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಹಣ ಉಳಿದಿದೆ.

ರಾಜ್ಯದ ಕೆಲವು ಸಂಸತ್‌ ಸದಸ್ಯರು ತಮ್ಮ ಕ್ಷೇತ್ರಾಭಿವೃದ್ಧಿ ಅನುದಾನವನ್ನು ಪ್ರಧಾನ ಮಂತ್ರಿಗಳ ‍‍ಪಿಎಂ ಕೇರ್ಸ್ ಗೆ
ದೇಣಿಗೆ ನೀಡಿದ್ದಾರೆ. ಸಂಸದರು ತಮ್ಮ ಅನುದಾನವನ್ನು ಮುಖ್ಯಮಂತ್ರಿಗಳ ನಿಧಿಗೆ ಕೊಡದೆ ಪಿಎಂ–ಕೇರ್ಸ್‌ಗೆ ನೀಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.