ADVERTISEMENT

ಕೊರೊನಾ ತಿಳಿದುಕೊಳ್ಳೋಣ: ಕೋವಿಡ್‌ಗೆ ‘ರೆಮಿಡಿಸಿವಿರ್’ ಪರಿಣಾಮಕಾರಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 19:31 IST
Last Updated 9 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ರೋಗಿಗಳಿಗೆ ರೆಮಿಡಿಸಿವಿರ್‌ (Remedisivir) ಇಂಜೆಕ್ಷನ್‌ ಪರಿಣಾಮಕಾರಿಯಾಗಿದ್ದು, ಚಿಕಿತ್ಸೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ಎಲ್ಲ ಕೋವಿಡ್‌ ಆಸ್ಪತ್ರೆಗಳಲ್ಲಿನ ಔಷಧ ಮಳಿಗೆಗಳಲ್ಲಿ ಈ ಇಂಜೆಕ್ಷನ್‌ ಲಭ್ಯ ಇದೆ. ರಕ್ತದಲ್ಲಿ ಆಮ್ಲಜನಕ ಮಟ್ಟ 85ರಿಂದ 90ಕ್ಕಿಂತ ಕಡಿಮೆ ಇದ್ದ ರೋಗಿಗಳಿಗೆ ಈ ಇಂಜೆಕ್ಷನ್‌ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿಯೇ ಹೇಳಲಾಗಿದೆ. 6 ಇಂಜೆಕ್ಷನ್‌ಗಳಿಗೆ ₹32,400 ಅಗುತ್ತದೆ. ಸರ್ಕಾರಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆಸ್ಪತ್ರೆಗಳು ಅಥವಾ ಬಿಬಿಎಂಪಿ ಕೋಟಾದಡಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಈ ಇಂಜೆಕ್ಷನ್‌ಗಳನ್ನು ಸರ್ಕಾರ ಉಚಿತವಾಗಿ ಪೂರೈಸುತ್ತಿದೆ.

ಚಿಕಿತ್ಸೆ ನೀಡುವ ವೈದ್ಯರೇ ನಿರ್ದಿಷ್ಟ ನಮೂನೆಯಲ್ಲಿ ಇಂಜೆಕ್ಷನ್‌ ಹೆಸರು ಬರೆದುಕೊಡಬೇಕು. ಆರೋಗ್ಯ ಮಿತ್ರ ಮಳಿಗೆ ಮೂಲಕ ಇದನ್ನು ರೋಗಿಗೆ ಪೂರೈಸಲಾಗುತ್ತದೆ. ಕೋವಿಡ್‌ ಆಸ್ಪತ್ರೆಯಲ್ಲಿರುವ ಆರೋಗ್ಯ ಮಿತ್ರ ಮಳಿಗೆಗಳಲ್ಲಿ ಈ ಇಂಜೆಕ್ಷನ್ ಲಭ್ಯವಿದೆ. ಇಂಜೆಕ್ಷನ್‌ಗಳು ಖಾಲಿ ಆಗಿದ್ದರೂ ಒಂದೆರಡು ಗಂಟೆಗಳಲ್ಲಿ ವ್ಯವಸ್ಥೆ ಮಾಡುತ್ತಾರೆ.

ADVERTISEMENT

ಈ ಇಂಜೆಕ್ಷನ್‌ ನೀಡಲು ಆಸ್ಪತ್ರೆಗಳು ಹಣ ಕೇಳಿದರೆ ಅಥವಾ ಯಾವುದೇ ರೋಗಿ ಈ ಇಂಜೆಕ್ಷನ್‌ ಖರೀದಿಸಲು ಮುಂದಾದರೆ, ಆರೋಗ್ಯ ಮಿತ್ರ ಲಭ್ಯವಿರದಿದ್ದರೆ, 1800–4252646 ಅಥವಾ 1800–425 8330 ಸಂಖ್ಯೆಗೆ ಕರೆ ಮಾಡಬಹುದು. ಸರ್ಕಾರಿ ಕೋಟಾದ ಅಡಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಂದ ಇಂಜೆಕ್ಷನ್‌ಗೆ ಹಣ ಕೇಳುವಂತಿಲ್ಲ ಎಂದೂ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.