ADVERTISEMENT

ನಿಗಮ– ಮಂಡಳಿ ನೇಮಕ: ಇಂದು ಅಂತಿಮವಾಗುತ್ತಾ ಪಟ್ಟಿ?

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ಅವರು ಮಂಗಳವಾರ ಬೆಂಗಳೂರಿಗೆ ಬರಲಿದ್ದಾರೆ. 20 ಶಾಸಕರು, 15 ಕಾರ್ಯಕರ್ತರಿಗೆ ಅವಕಾಶ ಸಿಗುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 0:09 IST
Last Updated 28 ನವೆಂಬರ್ 2023, 0:09 IST
   

ಬೆಂಗಳೂರು: ನಿಗಮ– ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಎರಡನೇ ಸುತ್ತಿನ ಸಭೆ ನಡೆಸಲು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ ಅವರು ಮಂಗಳವಾರ (ನ. 28) ನಗರಕ್ಕೆ ಬರಲಿದ್ದಾರೆ. 

ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ನಿಗಮ– ಮಂಡಳಿಗಳಿಗೆ ನೇಮಕ ಬಹುತೇಕ ಅಂತಿಮಗೊಳ್ಳಲಿದೆ. ಬಳಿಕ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಲು ಈ ಮೂವರು ನಾಯಕರು ನಿರ್ಧರಿಸಿದ್ದಾರೆ. ಡಿ. 4ರಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮೊದಲು ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಇತ್ತೀಚೆಗೆ ಸಭೆ ಸೇರಿದ್ದ ಈ ಮೂವರು ನಾಯಕರು, ಶಾಸಕ ಬಸವರಾಜ ರಾಯರಡ್ಡಿ ಮತ್ತು ಗೃಹ ಸಚಿವ ಸಚಿವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಅಲ್ಲದೆ, ಕೆಲವು ಶಾಸಕರಿಗೂ ಕರೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದರು.

ADVERTISEMENT

ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ಅವಕಾಶ ನೀಡಿ, ನಂತರ ಕಾರ್ಯರ್ತರಿಗೆ ಸ್ಥಾನ ನೀಡಲು ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದ್ದರು. ಆದರೆ, ಶಾಸಕರ ಜೊತೆಗೆ ಕೆಲವು ಕಾರ್ಯಕರ್ತರಿಗೂ ಅವಕಾಶ ನೀಡುವುದು ಒಳ್ಳೆಯದು ಎಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ. ಹೀಗಾಗಿ, 20 ಶಾಸಕರು, ವಿಧಾನ ಪರಿಷತ್ತಿನ ನಾಲ್ವರು ಸದಸ್ಯರ ಜೊತೆಗೆ ಪಕ್ಷದ 10 ರಿಂದ 15 ಕಾರ್ಯಕರ್ತರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.