ADVERTISEMENT

‘ನ್ಯಾಯಮೂರ್ತಿಗಳು ದೋಷಕ್ಕೆ ಹೊರತಾದವರಲ್ಲ’

ಅಶ್ಲೀಲ ಚಿತ್ರ ವೀಕ್ಷಣೆ ಆರೋಪ: ಆದೇಶ ಹಿಂಪಡೆದ ಪೀಠ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 18:56 IST
Last Updated 22 ಜುಲೈ 2024, 18:56 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನ್ಯಾಯಮೂರ್ತಿಗಳು ಎಂದಾಕ್ಷಣ ದೋಷಾತೀತರೇನೂ ಅಲ್ಲ. ನಾವುಗಳೂ ಮನುಷ್ಯರೇ.  ನಿರ್ವಹಿಸುವ ಕೆಲಸಗಳಲ್ಲೆ ಕೆಲವೊಮ್ಮೆ ತಪ್ಪುಗಳಾಗುತ್ತವೆ. ತಪ್ಪಾಗಿದೆ ಎಂದು ಕಂಡುಬಂದ ತಕ್ಷಣ, ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಒಪ್ಪಿಕೊಳ್ಳಬೇಕಾದ್ದು ಧರ್ಮ. ತಪ್ಪನ್ನೇ ಮುಂದುವರಿಸುತ್ತೇವೆಂದರೆ ನಾವೇನೂ ದೊಡ್ಡವರಾಗಿ ಬಿಡುವುದಿಲ್ಲ...’

‘ಆನ್‌ಲೈನ್‌ಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ವೀಕ್ಷಿಸಿದ ವ್ಯಕ್ತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 67ಬಿ ಅಡಿ ಪ್ರಕರಣ ದಾಖಲಿಸಲಾಗದು’ ಎಂದು 2024ರ ಜುಲೈ 10ರಂದು ನೀಡಿದ್ದ ತನ್ನ ಆದೇಶವನ್ನು ಹಿಂಪಡೆದಿರುವ ಹೈಕೋರ್ಟ್ ಹೇಳಿರುವ ಮಾತುಗಳಿವು.

‘ಅಶ್ಲೀಲ ವೆಬ್‌ಸೈಟ್‌ ವೀಕ್ಷಿಸುವುದು ಮಾಹಿತಿ ಪ್ರಸಾರ ಅಥವಾ ವರ್ಗಾವಣೆ ಮಾಡಿದಂತಾಗುವುದಿಲ್ಲ’ ಎಂದು ನೀಡಿದ್ದ ತನ್ನ ಈ ಮೊದಲಿನ ಆದೇಶವನ್ನು ಹಿಂಪಡೆದಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 67ಬಿ (ಬಿ) ಅನ್ನು ಪರಿಗಣಿಸದೆ ಆದೇಶ ಮಾಡಲಾಗಿತ್ತು. ಆದರೆ, ಇದು ತಪ್ಪು ಎಂಬುದು ಗೊತ್ತಾಗಿದೆ’ ಎಂದು ಹೇಳಿ, ತಪ್ಪನ್ನು ಸರಿಪಡಿಸಿಕೊಂಡಿರುವುದಾಗಿ ತಿಳಿಸಿದೆ. 

ADVERTISEMENT

ಆದೇಶ ಹಿಂಪಡೆಯುವಂತೆ ಕೋರಿ ರಾಜ್ಯ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮೆಮೊ ಅನ್ನು ಪುರಸ್ಕರಿಸಿದೆ. ಅಂತೆಯೇ, ಪ್ರಕರಣದ ಅರ್ಜಿದಾರ ಎನ್‌.ಇನಾಯತ್‌ಉಲ್ಲಾ ವಿರುದ್ಧ ತನಿಖೆ ಮುಂದುವರಿಸಲು ಅನುಮತಿ ನೀಡಿದೆ.

ಮೆಮೊ ವಿಚಾರಣೆ ನಡೆಸಿದ ನ್ಯಾಯಪೀಠವು, ‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 67ಬಿ (ಎ) ಆಧರಿಸಿ ಈ ಮೊದಲು ಆದೇಶ ಮಾಡಲಾಗಿತ್ತು. ಕಲಂ 67ಬಿ (ಬಿ) ಅಡಿ ವಿದ್ಯುನ್ಮಾನ ಮಾಧ್ಯಮದಲ್ಲಿ ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವ, ಲೈಂಗಿಕವಾಗಿ ಬಿಂಬಿಸುವ ಬರಹ ಅಥವಾ ಡಿಜಿಟಲ್‌ ಪ್ರತಿಬಿಂಬ ಕಳುಹಿಸುವುದು, ಕೇಳುವುದು, ಅವುಗಳನ್ನು ಬ್ರೌಸ್‌ ಮಾಡುವುದು, ಡೌನ್‌ಲೋಡ್‌ ಮಾಡುವುದು, ಜಾಹೀರಾತುಗಳ ಮೂಲಕ ಉತ್ತೇಜಿಸುವುದು, ಹಂಚುವುದು ಕಲಂ 67ಬಿ ಅಡಿಯ ಪ್ರಕ್ರಿಯೆಗೆ ನಾಂದಿ ಹಾಡಲಿದೆ’ ಎಂದು ಹೇಳಿದೆ.

‘ಈ ಪ್ರಕರಣದಲ್ಲಿ ಕಾಯ್ದೆಯ ಕಲಂ 67ಬಿಯ ಉಪ ಕಲಂ ಬಿ ಅನ್ವಯವಾಗುತ್ತದೆ. ಮುಂದಿನ ತನಿಖೆಗೆ ಅವಕಾಶ ನೀಡದೇ ಪ್ರಕ್ರಿಯೆ ರದ್ದುಪಡಿಸಿದ್ದು, ಕಲಂ 67ಬಿ (ಬಿ) ಹಿನ್ನೆಲೆಯಲ್ಲಿ ನಿಸ್ಸಂಶಯವಾಗಿ ಅರ್ಜಿದಾರರ ವಿರುದ್ಧದ ಪ್ರಕ್ರಿಯೆ ವಜಾ ಮಾಡಿರುವುದನ್ನು ಹಿಂಪಡೆಯಲು ಸಕಾರಣವಿದೆ‘ ಎಂದು ತಿಳಿಸಿದೆ.

‘ಒಮ್ಮೆ ಹೊರಡಿಸಿದ ಆದೇಶ ಹಿಂಪಡೆಯಲು ಅಥವಾ ಅದನ್ನು ಮರು ಪರಿಶೀಲಿಸಿಲು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 362ರ ಅಡಿಯಲ್ಲಿ ಈ ನ್ಯಾಯಾಲಯಕ್ಕೆ ನಿರ್ಬಂಧವಿದೆ’ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ಸಿಆರ್‌ಪಿಸಿ ಕಲಂ 482 ಅನ್ನು ಕಲಂ 362 ನಿಯಂತ್ರಿಸಲು ಆಗದು’ ಎಂದು ಹೇಳಿದೆ.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ

ಮಾಡಿದ ತಪ್ಪನ್ನೇ ಶಾಶ್ವತಗೊಳಿಸುವ ಪರಿ ಅರ್ಥಹೀನ. ಗ್ರಹಿಕೆಯಲ್ಲಿ ತಪ್ಪಾಗಿದೆ ಎಂದು ತಿಳಿದುಬಂದ ನಂತರ ಅದನ್ನು ತಿದ್ದಿಕೊಳ್ಳಬೇಕು. ಅದನ್ನೇ ಮುಂದುವರಿಸಿಕೊಂಡು ಹೋಗುವುದು ವೀರೋಚಿತವಲ್ಲ.

- ಎಂ.ನಾಗಪ್ರಸನ್ನ ನ್ಯಾಯಮೂರ್ತಿ

ಏನಿದು ಪ್ರಕರಣ? ‘

ಹೊಸಕೋಟೆ ತಾಲ್ಲೂಕಿನ ವಿವಿ ಬಡಾವಣೆ ನಿವಾಸಿ ಎನ್‌.ಇನಾಯತ್‌ಉಲ್ಲಾ ಬಿನ್‌ ನವಾಬ್‌ ಜಾನ್‌ (46) 2022ರ ಮಾರ್ಚ್‌ 23ರಂದು ಮಧ್ಯಾಹ್ನ 3.50ರಿಂದ ಸಂಜೆ 4.40 ಗಂಟೆ ಮಧ್ಯದ ಅವಧಿಯಲ್ಲಿ ಮಕ್ಕಳ ಅಶ್ಲೀಲ ಭಾವಚಿತ್ರ ವಿಡಿಯೊ ವೀಕ್ಷಣೆ ಮಾಡಿದ್ದಾರೆ’ ಎಂಬ ಆರೋಪದಡಿ ಬೆಂಗಳೂರಿನ ಸೆನ್‌ (ಸೈಬರ್ ಎಕನಾಮಿಕ್‌ ಅಂಡ್‌ ನಾರ್ಕೊಟಿಕ್‌) ಕ್ರೈಂ ಪೊಲೀಸ್‌ ಠಾಣೆಯಲ್ಲಿ ಐ.ಟಿ ಕಾಯ್ದೆ 67 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ‘ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖ್ಯ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಇನಾಯುತ್‌ಉಲ್ಲಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಇನಾಯುತುಲ್ಲಾ ವಿರುದ್ಧದ ಪ್ರಕರಣ ರದ್ದುಪಡಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.