
ಬೆಂಗಳೂರು: ಭ್ರಷ್ಟಾಚಾರ ಆರೋಪದ ಮೇಲೆ ತಮ್ಮ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ಪಟ್ಟು ಹಿಡಿದಿರುವ ಮಧ್ಯೆಯೇ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಸದನದಲ್ಲಿ ಗದ್ದಲ ಗಲಾಟೆ ಹಾಗೂ ವಿರೋಧ ಪಕ್ಷಗಳ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದ್ದ ಕಾರಣ ಸಿದ್ದರಾಮಯ್ಯ ಸದನಕ್ಕೆ ಸ್ವಲ್ಪ ತಡವಾಗಿಯೇ ಬಂದರು. ಅದಕ್ಕೂ ಮೊದಲು ಸಿದ್ದರಾಮಯ್ಯ ಅವರನ್ನು ಅವರ ಸರ್ಕಾರಿ ನಿವಾಸದಲ್ಲಿ ತಿಮ್ಮಾಪುರ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ತಿಮ್ಮಾಪುರ, ‘ಬಿಜೆಪಿಯವರು ಹೇಳಿದ ಹಾಗೆ ರಾಜೀನಾಮೆ ಕೊಟ್ಟರೆ ಸರ್ಕಾರ ನಡೆಸಲು ಆಗುತ್ತಾ? ಏನು ಸಾಕ್ಷ್ಯ ಇದೆ ನನ್ನ ವಿರುದ್ಧ? ಇದೊಂದು ರಾಜಕೀಯ ಷಡ್ಯಂತ್ರ’ ಎಂದರು.
‘ಬಿಜೆಪಿಯವರು ತಪ್ಪು ಮಾಡುತ್ತಿದ್ದಾರೆ. ಒತ್ತಡದಿಂದ ಅವರು ಹೀಗೆ ಮಾಡುತ್ತಿದ್ದಂತೆ ಕಾಣಿಸುತ್ತಿದೆ. ನಾನು ಸದನದಲ್ಲಿ ಈಗಾಗಲೇ ಈ ಬಗ್ಗೆ ಮಾತನಾಡಿದ್ದೇನೆ. ಯಾವುದೋ ಅಧಿಕಾರಿ ಫೋನ್‌ನಲ್ಲಿ ಮಾತಾಡಿದರೆ ಅದಕ್ಕೆ ಮತ್ತು ನನಗೆ ಏನು ಸಂಬಂಧ? ಯಾರು ತಪ್ಪು ಮಾಡಿದ್ದಾರೊ ಅವರು ಅನುಭವಿಸ್ತಾರೆ’ ಎಂದರು.
‘ಈಗಾಗಲೇ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸುಳ್ಳು ಸುದ್ದಿ, ಸುಳ್ಳು ಆಪಾದನೆ ಮಾಡಲಾಗುತ್ತಿದೆ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಏನೂ ಕೇಳಿಯೂ ಇಲ್ಲ. ನಾನು ಏನೂ ಹೇಳಿಯೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.