ADVERTISEMENT

ಅಂಬೇಡ್ಕರ್ ಅಭಿವೃದ್ಧಿ ನಿಗಮ: ‘ಕುರ್ಚಿ’ಗಾಗಿ ಗುದ್ದಾಟ

ಭ್ರಷ್ಟಾಚಾರ ಆರೋಪ– ವರ್ಗಾವಣೆಯಾದರೂ ಪಟ್ಟ ಬಿಟ್ಟುಕೊಡದ ಎಂಡಿ

ರಾಜೇಶ್ ರೈ ಚಟ್ಲ
Published 6 ನವೆಂಬರ್ 2022, 20:52 IST
Last Updated 6 ನವೆಂಬರ್ 2022, 20:52 IST
   

ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಡಾ.ಬಿ. ಆರ್‌. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಕೆ.ಎಂ. ಸುರೇಶ್‌ ಕುಮಾರ್‌ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದರೂ, ‘ಕುರ್ಚಿ’ ಬಿಟ್ಟು ಕೊಡಲು ಅವರು ನಿರಾಕರಿಸಿದ್ದಾರೆ. ಹೀಗಾಗಿ, ಆ ಹುದ್ದೆಗೆ ವರ್ಗಾವಣೆಗೊಂಡಿರುವ ಕೆ.ಎನ್‌. ಸುರೇಶ್‌ ನಾಯ್ಕ್‌ ಪರದಾಡುತ್ತಿದ್ದು, ಇಬ್ಬರ ಮಧ್ಯೆ ‘ಕುರ್ಚಿಗಾಗಿ ಗುದ್ದಾಟ’ ನಡೆದಿದೆ.

ಸುರೇಶ್‌ ಕುಮಾರ್‌ ವಿರುದ್ಧ ಭ್ರಷ್ಟಚಾರದ ಆರೋಪ ಹೊರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿತ್ತು. ಕೂಡಲೇ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರೆ, ತಕ್ಷಣವೇ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಮುಖ್ಯ ಕಾರ್ಯದರ್ಶಿಯವರೂ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯ ಸೂಚನೆಯನ್ನು ಉಲ್ಲೇಖಿಸಿ ಸುರೇಶ್‌ ಕುಮಾರ್‌ಗೆ ಅ. 27 ರಂದು ನೋಟಿಸ್‌ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್‌ ಮಣಿವಣ್ಣನ್‌, ಅಮಾನತುಪಡಿಸಿ ತನಿಖೆಗೆ ಆದೇಶಿಸುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಆರೋಪಗಳಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ವಿವರಣೆ ನೀಡಬೇಕು ಎಂದೂ ನೋಟಿಸ್‌ನಲ್ಲಿ ಹೇಳಿದ್ದಾರೆ. ಆ ಬೆನ್ನಲ್ಲೆ, ಸುರೇಶ್‌ ಕುಮಾರ್‌ ಅವರನ್ನು (ಅ. 29) ಯಾವುದೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಸುರೇಶ್‌ ನಾಯ್ಕ್ ಅವರು ಅ. 30 ಭಾನುವಾರ ಆಗಿದ್ದರಿಂದ 31 ರಂದು ಅಧಿಕಾರ ವಹಿಸಿಕೊಳ್ಳಲು ನಿಗಮಕ್ಕೆ ತೆರಳಿದ್ದರು. ಆದರೆ, ಪ್ರವಾಸದ ಹೆಸರಿನಲ್ಲಿ ಸುರೇಶ್‌ಕುಮಾರ್‌ ಅಂದು ಕಚೇರಿಗೆ ಬಂದಿರಲಿಲ್ಲ. ಹೀಗಾಗಿ, ಅವರ ಅನುಪಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದ ನಾಯ್ಕ್‌, ಇಲಾಖೆಯ ಕಾರ್ಯದರ್ಶಿ ಮತ್ತು ಸಚಿವರಿಗೆ ಮಾಹಿತಿ ನೀಡಿದ್ದರು.

ನ. 1 ರಂದು ರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ರಜೆಯಾಗಿದ್ದು, 2 ರಂದು ಮತ್ತೆ ನಾಯ್ಕ್‌ ಅವರು ಕಚೇರಿಗೆ ಬರುವಷ್ಟರಲ್ಲಿ ಸುರೇಶ್‌ಕುಮಾರ್‌ ಅವರೇ ಎಂಡಿ ಕುರ್ಚಿಯಲ್ಲಿ ಕುಳಿತಿದ್ದರು. ಸರ್ಕಾರದ ಆದೇಶದಂತೆ ತಾನು ಅಧಿಕಾರ ವಹಿಸಿಕೊಂಡಿರುವ ಬಗ್ಗೆ ನಾಯ್ಕ್‌ ತಿಳಿಸಿದರೂ ಕೇಳಿಸಿಕೊಳ್ಳದ ಸುರೇಶ್‌ ಕುಮಾರ್‌, ಕುರ್ಚಿ ಬಿಟ್ಟುಕೊಟ್ಟಿಲ್ಲ. ಅಲ್ಲದೆ, ತಮ್ಮ ಬೆಂಬಲಿಗರನ್ನು ಕೊಠಡಿಯಲ್ಲಿ ಕುಳ್ಳಿರಿಸಿಕೊಂಡಿದ್ದರು ಎಂದೂ ಆರೋಪಿಸಲಾಗಿದೆ. ಹೀಗಾಗಿ ಅಂಬೇಡ್ಕರ್ ನಿಗಮದ ಬದಲು, ಪಕ್ಕದಲ್ಲಿಯೇ ಇರುವ ಅಂಬಿಗರ ಚೌಡಯ್ಯ ನಿಗಮದಲ್ಲಿ ನಾಯ್ಕ್‌ ಕುಳಿತಿದ್ದಾರೆ.

‘ಸರ್ಕಾರದ ಹಣ ದುರುಪಯೋಗ, ಅದಕ್ಷ ಆಡಳಿತದಿಂದ ಪರಿಶಿಷ್ಟ ಜಾತಿಯ ಬಡವರ ಅಭಿವೃದ್ಧಿಗೆ ಸುರೇಶ್‌ ಕುಮಾರ್‌ ಕಂಟಕ ಆಗಿದ್ದಾರೆ. ಅವರು ನಿಗಮವನ್ನು ಸ್ವಂತ ಕುಟುಂಬದ ಟ್ರಸ್ಟ್‌ ರೀತಿಯಲ್ಲಿ ನಿರ್ವಹಿಸಿ ಸರ್ಕಾರದ ಕಾಯ್ದೆಗಳು, ನಿಯಮಗಳು, ಆದೇಶಗಳು, ಸುತ್ತೋಲೆಗಳನ್ನು ಉಲ್ಲಂಘಿಸಿ ನೂರಾರು ಕೋಟಿ ಭ್ರಷ್ಟಾಚಾರಕ್ಕೆ, ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದಾರೆ’ ಎಂದು ಆರೋಪಿಸಿ ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ’ ದೂರು ನೀಡಿದೆ.

ಅಧಿವೇಶನದಲ್ಲೂ ಅಕ್ರಮ ಪ್ರಸ್ತಾಪ
ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಿದ 2019–20 ಮತ್ತು 2020–21ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಯಿಸಲು ಕರೆದಿದ್ದ ಟೆಂಡರ್‌ನಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪದ ಬಗ್ಗೆ ಸುರೇಶ್ ಕುಮಾರ್ ವಿರುದ್ದ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು. ಟೆಂಡರ್‌ದಾರರು ಸಲ್ಲಿಸಿದ್ದ ಪ್ರಮಾಣಪತ್ರದ ಬಗ್ಗೆ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಶಾಸಕರ ಸಮಿತಿ ಸಭೆಯಲ್ಲೂ ಆಕ್ಷೇಪ ವ್ಯಕ್ತಪಡಿಸಿದ್ದರು.

*
ನಾನು ಇನ್ನೂ ಹುದ್ದೆಯಿಂದ ಬಿಡುಗಡೆಯಾಗಿಲ್ಲ. ಸರ್ಕಾರ ಬೇರೆ ಹುದ್ದೆಯನ್ನೂ ತೋರಿಸಿಲ್ಲ. ನನ್ನ ಜಾಗಕ್ಕೆ ನಿಯೋಜನೆಗೊಂಡವರು ಅಕ್ರಮವಾಗಿ ಹುದ್ದೆ ವಹಿಸಿಕೊಂಡಿದ್ದಾರೆ.
-ಕೆ.ಎಂ. ಸುರೇಶ್‌ ಕುಮಾರ್‌, ಹಾಲಿ ವ್ಯವಸ್ಥಾಪಕ ನಿರ್ದೇಶಕ

*
ನನ್ನನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಸರ್ಕಾರ ನಿಯೋಜನೆ ಮಾಡಿದೆ. ಆದರೆ, ಹಿಂದಿನ ವ್ಯವಸ್ಥಾಪಕರು ಕುರ್ಚಿ ಬಿಟ್ಟುಕೊಡದೆ, ತಾವೇ ಅಧಿಕಾರ ಚಲಾಯಿಸುತ್ತಿದ್ದಾರೆ
-ಕೆ.ಎನ್‌. ಸುರೇಶ್‌ ನಾಯ್ಕ್‌, ನಿಯೋಜಿತ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.