ADVERTISEMENT

ಲಂಚ ಪ್ರಕರಣ: ಭೂಮಾಪನ ಇಲಾಖೆ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 5:53 IST
Last Updated 26 ಆಗಸ್ಟ್ 2021, 5:53 IST
ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣ
ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣ   

ಬೆಂಗಳೂರು: ಆಸ್ತಿಯೊಂದರ ಭೂಮಾಪನ ನಡೆಸಿ, ಗಡಿ ಗುರುತಿಸಲು ₹ 70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 20 ಲಕ್ಷ ಪಡೆದಿರುವ ಆರೋಪದ ಮೇಲೆ ಭೂಮಾಪನ ಇಲಾಖೆಯ ಅಧಿಕಾರಿಗಳು ಸೇರಿ ನಾಲ್ವರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿದ್ದಾರೆ. ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರು ಉತ್ತರ ಹೆಚ್ಚುವರಿ ತಾಲ್ಲೂಕಿನ ಕುದುರೆಗೆರೆ ಗ್ರಾಮದಲ್ಲಿನ ಸ್ವತ್ತಿನ ಗಡಿ ಗುರುತಿಸಲು ಹೈಕೋರ್ಟ್ ಆದೇಶದಂತೆ ಪ್ರಕ್ರಿಯೆ ನಡೆಸುವಂತೆ ಕೋರಿ ನಾಗದಾಸನಪುರ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಪ್ರಕ್ರಿಯೆ ಪೂರ್ಣಗೊಳಿಸಲು ₹ 70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಆನಂದ ಕುಮಾರ್, ₹ 20 ಲಕ್ಷ ಪಡೆದಿದ್ದಾರೆ ಎಂದು ಆರೋಪಿಸಿ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು.

ಆನಂದ ಕುಮಾರ್, ಅವರ ಕಚೇರಿಯ ಹೊರ ಗುತ್ತಿಗೆ ನೌಕರ ರಮೇಶ್, ಭೂಮಾಪನ ಇಲಾಖೆ ಉಪ ನಿರ್ದೇಶಕಿ ಕುಸುಮಲತಾ ಮತ್ತು ಭೂಮಾಪಕ ಶ್ರೀನಿವಾಸ್ ಅವರ ಮನೆಗಳ ಮೇಲೆ ಬುಧವಾರ ರಾತ್ರಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದಾರೆ.

ADVERTISEMENT

ಆರೋಪಿಗಳ ಮನೆಗಳಲ್ಲಿ ₹ 25.70 ಲಕ್ಷ ನಗದು ಹಾಗೂ ₹ 70 ಲಕ್ಷ ಮೊತ್ತದ ಮೂರು ಚೆಕ್‌ಗಳು ಪತ್ತೆಯಾಗಿವೆ. ಅವುಗಳನ್ನು ವಶಪಡಿಸಿಕೊಂಡು, ಆನಂದ ಕುಮಾರ್ ಮತ್ತು ರಮೇಶ್ ಅವರನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.