ADVERTISEMENT

ಲಂಚಾವತಾರ | ಆರ್‌ಟಿಒದಲ್ಲಿ ದಲ್ಲಾಳಿಗಳ ಆಟ: ಯಾವ ಸೇವೆಗೆ ಎಷ್ಟು ಲಂಚ?

ಭ್ರಷ್ಟಾಚಾರ; ಜನರಿಗೆ ಪ್ರಹಾರ

ವಿ.ಎಸ್.ಸುಬ್ರಹ್ಮಣ್ಯ
Published 14 ಮಾರ್ಚ್ 2022, 6:15 IST
Last Updated 14 ಮಾರ್ಚ್ 2022, 6:15 IST
   

ಆರ್‌ಟಿಒ ಕೂಟ; ದಲ್ಲಾಳಿಗಳದ್ದೇ ಆಟ

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ವರಮಾನದ ಮೂಲಗಳಲ್ಲಿ ಒಂದಾಗಿರುವ ಸಾರಿಗೆ ಇಲಾಖೆ, ಅಧಿಕಾರಿಗಳು ಮತ್ತು ದಲ್ಲಾಳಿಗಳ ಅಪವಿತ್ರ ಮೈತ್ರಿಕೂಟ ನಡೆಸುತ್ತಿರುವ ಲಂಚಾವತಾರಕ್ಕೆ ನಲುಗಿ ಹೋಗುತ್ತಿದೆ. ರಾಜ್ಯದ ಬಹುತೇಕ ಪ್ರಾದೇಶಿಕ ಸಾರಿಗೆ ಕಚೇರಿಗಳು ಮತ್ತು ಅಂತರರಾಜ್ಯ ಗಡಿಗಳಲ್ಲಿರುವ ಸಾರಿಗೆ ತನಿಖಾ ಠಾಣೆಗಳು ಲಂಚ ವಸೂಲಿಯ ಕೇಂದ್ರಗಳಾಗಿ ಬದಲಾಗಿವೆ.

ರಾಜ್ಯದಲ್ಲಿ 71 ಪ್ರಾದೇಶಿಕ ಸಾರಿಗೆ ಕಚೇರಿಗಳು ಮತ್ತು ಅಂತರರಾಜ್ಯ ಗಡಿಗಳಲ್ಲಿ 15 ಸಾರಿಗೆ ತನಿಖಾ ಠಾಣೆಗಳಿವೆ. ಈ ಎಲ್ಲ ಕಡೆಗಳಲ್ಲಿ ದಲ್ಲಾಳಿಗಳೇ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದು, ಗರಿಗರಿ ನೋಟುಗಳ ಕಾಣಿಕೆ ಅರ್ಪಿಸದೆ ಸರ್ಕಾರಿ ಸೇವೆ ಪಡೆಯಲು ಸಾಧ್ಯವಿಲ್ಲ ಎಂಬ ದೂರುಗಳಿವೆ. ಸಾರಿಗೆ ಇಲಾಖೆಯ ಕಚೇರಿಗಳಿಗಿಂತಲೂ ಅವುಗಳ ಸುತ್ತಲೂ ಇರುವ ಸ್ಟೇಷನರಿ ಅಂಗಡಿಗಳು, ಕಿರಾಣಿ ಅಂಗಡಿಗಳಲ್ಲೇ ಎಲ್ಲವೂ ನಿರ್ಧಾರವಾಗುವ ವ್ಯವಸ್ಥೆ ಇದೆ.

ADVERTISEMENT

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಾಹನ ಚಾಲನೆ ಕಲಿಕಾ ಪರವಾನಗಿ, ವಾಹನ ಚಾಲನಾ ಪರವಾನಗಿ, ವಾಹನಗಳ ನೋಂದಣಿ ಮತ್ತು ನೋಂದಣಿ ಸಂಖ್ಯೆ ನೀಡುವುದು, ವಾಹನಗಳ ಸಾಮರ್ಥ್ಯ ಪ್ರಮಾಣ ಪತ್ರ ವಿತರಣೆ, ಮಾರಾಟವಾದ ವಾಹನಗಳ ದಾಖಲಾತಿಗಳಲ್ಲಿ ಹೆಸರು ಬದಲಾವಣೆ ಪ್ರಮುಖವಾಗಿ ನಡೆಯುತ್ತದೆ. ದಲ್ಲಾಳಿಗಳನ್ನು ಬಳಸಿಕೊಂಡು ಅಧಿಕಾರಿಗಳ ‘ಕೈ ಬಿಸಿ’ ಮಾಡದೇ ಇದ್ದರೆ ಈ ಯಾವ ಕೆಲಸವೂ ಇಲ್ಲಿ ಸುಲಭವಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ದಶಕಗಳಿಂದಲೂ ಇರುವ ಅಳಲು.

ಬಹುತೇಕ ಕಡೆ, ಪ್ರಕ್ರಿಯೆ ಪೂರ್ಣಗೊಂಡ ಕಡತಗಳು ಸಾರಿಗೆ ಅಧಿಕಾರಿಗಳ ಕಚೇರಿಯೊಳಕ್ಕೆ ಇರುವುದೇ ಇಲ್ಲ. ಸದ್ದಿಲ್ಲದೇ ಅವು ಸುತ್ತಮುತ್ತಲಿನ ಸ್ಟೇಷನರಿ ಅಂಗಡಿ, ಕಿರಾಣಿ ಅಂಗಡಿಗೆ ಬಂದು ಕುಳಿತಿರುತ್ತವೆ. ಕಚೇರಿಗೆ ಅರ್ಜಿ ನೀಡಿದವರು ಅಂಗಡಿ, ಮಳಿಗೆಗಳಲ್ಲಿ ‘ಕಾಣಿಕೆ’ ಅರ್ಪಿಸಿ ಆದೇಶದ ಪ್ರತಿ ಅಥವಾ ಪರವಾನಗಿಯನ್ನು ಪಡೆದುಕೊಳ್ಳಬೇಕಾದ ದುಃಸ್ಥಿತಿ ಇದೆ.

ವಾಹನ ಚಾಲನೆ ಕಲಿಕಾ ತರಬೇತಿ ಶಾಲೆಗಳ ಜತೆಗೂ ಸಾರಿಗೆ ಅಧಿಕಾರಿಗಳ ನಂಟು ಬಲವಾದದ್ದು. ನೇರವಾಗಿ ವಾಹನ ಚಾಲನೆ ಕಲಿಕಾ ಪರವಾನಗಿ ಅಥವಾ ವಾಹನ ಚಾಲನೆ ಪರವಾನಗಿ ಪಡೆಯಲು ಪ್ರಯತ್ನಿಸುವವರಿಗೆ ಹತ್ತಾರು ಸವಾಲುಗಳು ಎದುರಾಗುತ್ತವೆ. ಕಣ್ಣು, ಕಿವಿಯ ದೋಷದ ನೆಪ ಹೇಳಿ ಅರ್ಜಿ ತಿರಸ್ಕರಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ, ತರಬೇತಿ ಶಾಲೆಗಳ ಮೂಲಕ ಹೋದರೆ ಈ ಕೆಲಸ ನೀರು ಕುಡಿದಷ್ಟೇ ಸಲೀಸು. ಆದರೆ, ಇಲ್ಲಿ ನಿಗದಿತ ಶುಲ್ಕದ ಜತೆಗೆ ಒಂದಷ್ಟು ಹೆಚ್ಚು ಹಣ ಖರ್ಚು ಮಾಡಬೇಕಾದ ಹೊರೆಯನ್ನು ಹೊತ್ತುಕೊಳ್ಳಲೇಬೇಕು.

ದಲ್ಲಾಳಿಗಳ ದರ್ಬಾರು: ದಲ್ಲಾಳಿಗಳ ನೆರವಿಲ್ಲದೇ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕರು ಸೇವೆ ಪಡೆಯುವುದು ಕಷ್ಟ. ಅರ್ಜಿ, ಸರ್ಕಾರ ನಿಗದಿಪಡಿಸಿರುವ ಶುಲ್ಕದ ಜತೆಗೆ ಕಚೇರಿಯೊಳಗೆ ನಿಗದಿಯಾಗಿರುವ ಲಂಚದ ಮೊತ್ತವನ್ನೂ ದಲ್ಲಾಳಿಗಳ ಕೈಗಿತ್ತರೆ ಮುಂದಿನ ಪ್ರಕ್ರಿಯೆ ಸಲೀಸು. ಲಂಚ ಕೊಡಲು ನಿರಾಕರಿಸಿ ಖುದ್ದಾಗಿ ಸೇವೆ ಪಡೆಯಲು ಬಯಸಿದರೆ ಅಲೆದೂ, ಅಲೆದೂ ಸುಸ್ತು ಹೊಡೆಯಬೇಕು ಎನ್ನುತ್ತಾರೆ ಸಾರಿಗೆ ಕಚೇರಿಗಳ ಒಳ–ಹೊರಗನ್ನು ಬಲ್ಲ ಸಾರಿಗೆ ಕ್ಷೇತ್ರದ ಉದ್ಯಮಿಯೊಬ್ಬರು.

‘ಅಧಿಕಾರಿಗಳೇ ದಲ್ಲಾಳಿಗಳನ್ನು ನೇಮಿಸಿಕೊಂಡಿರುತ್ತಾರೆ. ಅವರೇ ಇಡೀ ಕಚೇರಿಯ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ದಲ್ಲಾಳಿಗಳು ಸೂತ್ರಧಾರರಂತೆ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪಾತ್ರಧಾರಿಗಳಂತೆ ನಡೆದುಕೊಳ್ಳುತ್ತಾರೆ. ಕೆಲವು ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸರದಿಯ ಟೋಕನ್‌ ನೀಡುವ ಅಧಿಕಾರವನ್ನೂ ದಲ್ಲಾಳಿಗಳ ಕೈಗೆ ನೀಡಲಾಗಿದೆ’ ಎಂದು ಅವರು ವಿವರಿಸಿದರು.

ಸಿಂಡಿಕೇಟ್‌ ಹಿಡಿತದಲ್ಲಿ ಇಲಾಖೆ!
ಕೆಲವು ಪ್ರಭಾವಿ ಅಧಿಕಾರಿಗಳು ‘ಸಿಂಡಿಕೇಟ್‌’ ಕಟ್ಟಿಕೊಂಡು ಇಡೀ ಸಾರಿಗೆ ಇಲಾಖೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ದೀರ್ಘ ಕಾಲದಿಂದ ನಡೆದುಕೊಂಡು ಬರುತ್ತಿದೆ. ಈಗ ಕೂಡ ಜಂಟಿ ಸಾರಿಗೆ ಆಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಮೋಟಾರು ವಾಹನ ನಿರೀಕ್ಷಕರು ಸೇರಿಕೊಂಡಿರುವ ಐವರು ಅಧಿಕಾರಿಗಳ ಒಂದು ‘ಸಿಂಡಿಕೇಟ್‌’ ಎಲ್ಲವನ್ನೂ ನಿರ್ಧರಿಸುತ್ತಿದೆ ಎಂಬ ಮಾಹಿತಿ ಇಲಾಖೆಯ ಒಳಗಿನಿಂದಲೇ ಲಭ್ಯವಾಗಿದೆ.

ಯಾವ ಅಧಿಕಾರಿ ಯಾವ ಹುದ್ದೆಯಲ್ಲಿರಬೇಕು? ಯಾರಿಗೆ ಆಯಕಟ್ಟಿನ ಹುದ್ದೆ ನೀಡಬೇಕು? ಯಾರಿಗೆ ಲಾಭವಿಲ್ಲದ ಹುದ್ದೆ ನೀಡಬೇಕು? ಎಂಬುದನ್ನು ಸಿಂಡಿಕೇಟ್‌ನಲ್ಲಿರುವ ಐವರು ಅಧಿಕಾರಿಗಳ ಕೂಟವೇ ನಿರ್ಧರಿಸುತ್ತಿದೆ. ವರ್ಗಾವಣೆಯ ಲಂಚದ ಹಣ ಸಂಗ್ರಹ, ತಿಂಗಳ ಮಾಮೂಲಿ ಸಂಗ್ರಹ, ಅದನ್ನು ‘ಮೇಲಿನವರಿಗೆ’ ತಲುಪಿಸುವ ಕೆಲಸ ಎಲ್ಲವನ್ನೂ ಈ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು ತರಹೇವಾರಿ ಕತೆಗಳನ್ನು ಬಿಚ್ಚಿಡುತ್ತಾರೆ.

ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರು, ಹಿರಿಯ ಮೋಟಾರು ವಾಹನ ನಿರೀಕ್ಷಕರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹೆಚ್ಚಿನ ‘ಸಂಪಾದನೆ’ ಇದೆ. ಸಹಾಯಕ ಪ್ರಾದೇಶಿಕ ಅಧಿಕಾರಿಗಳಿಗೆ ಹೆಚ್ಚು ‘ಸಂಪಾದನೆ’ಗೆ ಅವಕಾಶವಿಲ್ಲ. ಹೀಗಾಗಿ ಬಡ್ತಿಯನ್ನೂ ಪಡೆಯದೆ ಹಿರಿಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ತೋರುವ ಅಧಿಕಾರಿಗಳ ಸಂಖ್ಯೆಯೂ ಇಲ್ಲಿ ಹೆಚ್ಚು.

ತನಿಖಾ ಠಾಣೆಗಳಲ್ಲಿ ಝಣಝಣ:ಸಾರಿಗೆ ತನಿಖಾ ಠಾಣೆಗಳಲ್ಲಿ ಹುದ್ದೆ ಪಡೆಯಲು ತೀವ್ರ ಪೈಪೋಟಿ ಇದೆ. ಝಳಕಿ, ಹುಮ್ನಾಬಾದ್‌, ನಂಗಲಿ, ಬಾಗೇಪಲ್ಲಿ, ನಿಪ್ಪಾಣಿ, ಕಾಗವಾಡ, ಅತ್ತಿಬೆಲೆ ಮತ್ತು ಹಗರಿ ತನಿಖಾ ಠಾಣೆಗಳಿಗೆ ಪೈಪೋಟಿ ಇದೆ.

ಇಲ್ಲಿ ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ಅರ್ಧದಷ್ಟು ಹುದ್ದೆಗಳು ಮಾತ್ರ ಭರ್ತಿ ಇರುತ್ತವೆ. ಆದರೆ, ಮಂಜೂರಾದ ಹುದ್ದೆಗಳ ಲೆಕ್ಕದಲ್ಲೇ ವರ್ಗಾವಣೆಯ ‘ಕಾಣಿಕೆ’, ತಿಂಗಳ ‘ಮಾಮೂಲಿ’ ಸಂದಾಯವಾಗುತ್ತದೆ. ಅಲ್ಲಿ ನಿಯುಕ್ತಿಗೊಂಡ ಅಧಿಕಾರಿಗಳು ತಮ್ಮದೇ ಆದ ಖಾಸಗಿ ವ್ಯಕ್ತಿಗಳ ಪಡೆ ಕಟ್ಟಿಕೊಂಡು ತನಿಖಾ ಠಾಣೆಯನ್ನು ನಿರ್ವಹಿಸುತ್ತಾರೆ. 15 ತನಿಖಾ ಠಾಣೆಗಳಲ್ಲೇ ಪ್ರತಿ ತಿಂಗಳು ₹ 5 ಕೋಟಿಯಿಂದ ₹ 6 ಕೋಟಿ ಮಾಮೂಲಿ ಸಂಗ್ರಹಿಸಿ ಐವರು ಅಧಿಕಾರಿಗಳ ‘ಸಿಂಡಿಕೇಟ್‌’ಗೆ ತಲುಪಿಸಲಾಗುತ್ತಿದೆ ಎಂಬ ಆರೋಪವಿದೆ.

ಕನ್ನಡಿಯೊಳಗಿನ ಗಂಟು ಆನ್‌ಲೈನ್‌ ಸೇವೆ:30ಕ್ಕೂ ಹೆಚ್ಚು ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸುವ ವ್ಯವಸ್ಥೆ ಸಾರಿಗೆ ಇಲಾಖೆಯಲ್ಲಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಈ ವ್ಯವಸ್ಥೆ ತಂದಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಸಾರಿಗೆ ಇಲಾಖೆಯಲ್ಲಿ ಆನ್‌ಲೈನ್‌ ಸೇವೆ ಎಂಬುದು ಕನ್ನಡಿಯೊಳಗಿನ ಗಂಟಿನಂತಾಗಿದೆ.

‘ಆನ್‌ಲೈನ್‌ನಲ್ಲಿ ಸೇವೆ ಕೋರಿ ಸಲ್ಲಿಸುವ ಅರ್ಜಿಗಳಿಗೆ ಸಕಾಲದಲ್ಲಿ ಪ್ರತಿಕ್ರಿಯೆ ಬರುವುದೇ ಇಲ್ಲ. ತಿಂಗಳ ಬಳಿಕ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ. ಹೆಚ್ಚಿನ ಅರ್ಜಿಗಳಿಗೆ ತಿರಸ್ಕಾರದ ಹಿಂಬರಹ ಖಚಿತ ಎಂಬ ಸ್ಥಿತಿ ಇದೆ. ಆದರೆ, ದಲ್ಲಾಳಿಗಳ ಮೂಲಕ ನೇರ ಕಚೇರಿಗೆ ಹೋದರೆ ಒಂದೇ ದಿನದಲ್ಲಿ ಸೇವೆಗಳು ಲಭಿಸುತ್ತವೆ’ ಎಂದು ಸಾರಿಗೆ ಉದ್ಯಮಿಯೊಬ್ಬರು ತಿಳಿಸಿದರು.

‘ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ’
‘ಸಾರಿಗೆ ಇಲಾಖೆಯಲ್ಲಿ ಪ್ರಮುಖ ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ. ನಮ್ಮ ಇಲಾಖೆಯಲ್ಲಿಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಹಿಂದೆ ಭ್ರಷ್ಟಾಚಾರ ಇತ್ತು, ಈಗ ಅದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿದೆ’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ‘ಪ್ರಜಾವಾಣಿ’ಗೆಪ್ರತಿಕ್ರಿಯಿಸಿದರು. ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆಯಲ್ಲೂ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಅಂತಹಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.