ಕರ್ನಾಟಕ ಲೋಕಾಯುಕ್ತ
ಬೆಂಗಳೂರು: ಲೋಕಾಯುಕ್ತದ ಹೆಸರಿನಲ್ಲಿ ಸರ್ಕಾರದ ಇತರ ಅಧಿಕಾರಿಗಳಿದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಹಿಂದೆ ಬೆಂಗಳೂರು ನಗರ ಎಸ್‌ಪಿಯಾಗಿದ್ದ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಲೋಕಾಯುಕ್ತವು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಈ ಪ್ರಕರಣದ ತನಿಖೆಯ ಈವರೆಗಿನ ಪ್ರಗತಿ ಕುರಿತು ಲೋಕಾಯುಕ್ತ ರಿಜಿಸ್ಟ್ರಾರ್ ಅವರು ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
‘ಲೋಕಾಯುಕ್ತ ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲರ ಸೂಚನೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪ್ರಕಟಣೆ ಹೇಳಿದೆ.
‘ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಮಾಜಿ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪನನ್ನು ಬಂಧಿಸಲಾಗಿತ್ತು. ಲೋಕಾಯುಕ್ತ ಎಸ್‌ಪಿಯಾಗಿದ್ದ ಶ್ರೀನಾಥ್ ಜೋಷಿ ಜತೆಗೆ ಆತ ನಿರಂತರ ಸಂಪರ್ಕದಲ್ಲಿ ಇದ್ದ ಎಂಬುದು ವಿಚಾರಣೆ ವೇಳೆ ಪತ್ತೆಯಾಯಿತು’ ಎಂದು ವಿವರಿಸಿದೆ.
‘ಶ್ರೀನಾಥ್ ಜೋಷಿ ಜತೆಗೆ ಸಂಪರ್ಕದಲ್ಲಿ ಇದ್ದಾಗಲೇ, ನಿಂಗಪ್ಪನು ಸರ್ಕಾರದ ಇತರ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ವಸೂಲಿಯಿಂದ ಬಂದ ಕಪ್ಪು ಹಣವನ್ನು ಕಾನೂನುಬದ್ಧಗೊಳಿಸಿಕೊಳ್ಳುವ ಉದ್ದೇಶದಿಂದ ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾನೆ’ ಎಂದು ಮಾಹಿತಿ ನೀಡಿದೆ.
‘ನಿಂಗಪ್ಪನ ಪ್ರಕರಣದಲ್ಲಿ ಶ್ರೀನಾಥ್ ಜೋಷಿ ಅವರು ಅಖಿಲ ಭಾರತ ಸೇವಾ ನಿಯಮ–1968 ಅನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಅವರ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡುವಂತೆಯೂ ಕೋರಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
‘ಶ್ರೀನಾಥ್ ಮತ್ತು ನಿಂಗಪ್ಪ ಇಬ್ಬರೂ ವಾಟ್ಸ್‌ಆ್ಯಪ್ ಕರೆ ಮತ್ತು ಸಂದೇಶಗಳನ್ನು ಬಳಸುತ್ತಿದ್ದರು. ಇಬ್ಬರ ನಡುವಿನ ವಾಟ್ಸ್ಆ್ಯಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಮುದ್ರಿಸಿ, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಆರೋಪಿಗಳಿಗೆ ಹಣ ನೀಡಿರುವ ಬಗ್ಗೆ ಬಿಬಿಎಂಪಿ ಎಇಇ ಒಬ್ಬರು ಮಾತ್ರ ಮಾಹಿತಿ ನೀಡಿದ್ದು, ಹಣ ನೀಡಿದ ಇನ್ನಿತರ ಅಧಿಕಾರಗಳ ವಿವರ ಕಲೆಹಾಕಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸ್‌ನ ಮೂಲಗಳು ಖಚಿತಪಡಿಸಿವೆ.
41 ಪ್ರಕರಣ ದಾಖಲು: ಲೋಕಾಯುಕ್ತದ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಬೆದರಿಸಿ, ಹಣ ವಸೂಲಿ ಮಾಡಿದ್ದರ ಸಂಬಂಧ ರಾಜ್ಯದಾದ್ಯಂತ 41 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.
29,209 ಪ್ರಕರಣಗಳು ಬಾಕಿ: ‘ಲೋಕಾಯುಕ್ತರ ವ್ಯಾಪ್ತಿಯಲ್ಲಿ 7,110, ಉಪಲೋಕಾಯುಕ್ತ–1ರ ವ್ಯಾಪ್ತಿಯಲ್ಲಿ 6,927 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ’ ಎಂದು ಲೋಕಾಯುಕ್ತವು ತಿಳಿಸಿದೆ.
‘ಉಪಲೋಕಾಯುಕ್ತ–2ರ ಹುದ್ದೆ ತೆರವಾಗಿದ್ದ ಅವಧಿಯಲ್ಲಿ 1ನೇ ಉಪಲೋಕಾಯುಕ್ತರೇ ಆ ಪ್ರಕರಣಗಳನ್ನು ನಿರ್ವಹಿಸಿದ್ದು, ಆ ಅವಧಿಯಲ್ಲಿ ದಾಖಲಾಗಿದ್ದ 6,225 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ’ ಎಂದಿದೆ.
‘ಇನ್ನು ಉಪಲೋಕಾಯುಕ್ತ–2ರ ವ್ಯಾಪ್ತಿಯಲ್ಲಿರುವ 8,647 ದೂರುಗಳೂ ಸೇರಿ ಒಟ್ಟು 29,209 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಒಟ್ಟು 1,739 ಪ್ರಕರಣಗಳು ಇಲಾಖಾ ವಿಚಾರಣೆಯ ಹಂತದಲ್ಲಿವೆ’ ಎಂದು ಮಾಹಿತಿ ನೀಡಿದೆ.
ಕ್ರಿಪ್ಟೊ ಕರೆನ್ಸಿಯಲ್ಲಿ ₹4.92 ಕೋಟಿ ಹೂಡಿಕೆ
ಹಣ ವಸೂಲಿ ವ್ಯವಹಾರಗಳಿಗೆ ಸಂಬಂಧಿಸಿದ ಸಂದೇಶಗಳಲ್ಲಿ, ಹಣಕ್ಕೆ ‘ಕೆ.ಜಿ’ ಎಂಬ ಕೋಡ್‌ವರ್ಡ್ ಬಳಕೆ
ಆರೋಪಿ ನಿಂಗಪ್ಪನ ಮೊಬೈಲ್‌ನಲ್ಲಿ 24 ಕ್ರಿಪ್ಟೊ ಕರೆನ್ಸಿ ವ್ಯಾಲೆಟ್‌ಗಳು
13 ಕ್ರಿಪ್ಟೊ ವ್ಯಾಲೆಟ್‌ಗಳಲ್ಲಿ ಒಟ್ಟು ₹4.92 ಕೋಟಿ ಹೂಡಿಕೆ
ವಸೂಲಿಯ ಹಣವನ್ನು ಕಾನೂನುಬದ್ಧಗೊಳಿಸಿ ಕೊಳ್ಳಲು ಕ್ರಿಪ್ಟೊ ಹೂಡಿಕೆ ಮಾರ್ಗ ಬಳಕೆ
ಆಂತರಿಕ ನಿಗಾ ಘಟಕ: ಮತ್ತೆ ಪತ್ರ
ದಾಳಿ ಮತ್ತು ಟ್ರ್ಯಾಪ್ ಕಾರ್ಯಾಚರಣೆಗಳನ್ನು ಗೋಪ್ಯವಾಗಿ ನಡೆಸಲು ಜಿಲ್ಲಾ ನ್ಯಾಯಾಧೀಶರ ಮಟ್ಟದ ಹುದ್ದೆಗಳನ್ನು ಒಳಗೊಂಡ ಆಂತರಿಕ ನಿಗಾ ಘಟಕ ರಚಿಸಲು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒದಗಿಸಿ ಎಂದು ಲೋಕಾಯುಕ್ತವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
‘ಆಂತರಿಕ ನಿಗಾ ಘಟಕ ಆರಂಭಿಸಲು 24 ಅಧಿಕಾರಿ/ಸಿಬ್ಬಂದಿಯನ್ನು ಮಂಜೂರು ಮಾಡಿ ಎಂದು ಸರ್ಕಾರಕ್ಕೆ 2023 ಮತ್ತು 2024ರ ಡಿಸೆಂಬರ್‌ನಲ್ಲಿ ಪತ್ರ ಬರೆಯಲಾಗಿತ್ತು. ಭ್ರಷ್ಟಾಚಾರ ನಿಗ್ರಹ ದಳದಿಂದ ವರ್ಗಾವಣೆಯಾದ ಸಿಬ್ಬಂದಿಯನ್ನು ಬಳಸಿಕೊಂಡು ಆಂತರಿಕ ನಿಗಾ ಘಟಕ ರಚಿಸಿ ಎಂದು ಸರ್ಕಾರವು ನಮ್ಮ ಪ್ರಸ್ತಾವವನ್ನು ತಿರಸ್ಕರಿಸಿತ್ತು’ ಎಂದು ಲೋಕಾಯುಕ್ತವು ತಿಳಿಸಿದೆ.
‘ಸಂಸ್ಥೆಯಲ್ಲಿ ಲಭ್ಯವಿರುವ ಸಿಬ್ಬಂದಿ ಬಳಸಿಕೊಂಡೇ ತಾತ್ಕಾಲಿಕ ಆಂತರಿಕ ನಿಗಾ ಘಟಕಗಳನ್ನು ಆರಂಭಿಸಲಾಗಿದೆ. ಲೋಕಾಯುಕ್ತದ ಕಾರ್ಯಾಚರಣೆಯ ಗೋಪ್ಯತೆಯನ್ನು ಕಾಪಾಡಿಕೊಳ್ಳಲು ಜಿಲ್ಲಾ ನ್ಯಾಯಾಧೀಶರ ವೃಂದದ ಅಧಿಕಾರಿಗಳನ್ನು ಒಳಗೊಂಡ ಘಟಕದ ಅವಶ್ಯಕತೆ ಇದೆ ಎಂದು ಇದೇ ಜೂನ್ 23ರಂದು ರಾಜ್ಯಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.