ADVERTISEMENT

ಪರಿಶಿಷ್ಟರ ಮೀಸಲು ಹೆಚ್ಚಳ: ಪರಿಷತ್‌ ಸರ್ವಾನುಮತದ ಒಪ್ಪಿಗೆ

ಮುಂದೆ ಎದುರಾಗುವ ಪರಿಣಾಮ ಎದುರಿಸಲು ಸಿದ್ಧ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 16:05 IST
Last Updated 27 ಡಿಸೆಂಬರ್ 2022, 16:05 IST
   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಒಟ್ಟಾರೆ ಶೇ 6 ರಷ್ಟು ಹೆಚ್ಚಿಸುವ ಮಸೂದೆಗೆ ವಿಧಾನ ಪರಿಷತ್‌ ಮಂಗಳವಾರ ಸರ್ವಾನುಮತದಿಂದ ಅಂಗೀಕಾರ ನೀಡಿತು.

ಮೀಸಲಾತಿ ಹೆಚ್ಚಳದ ಕುರಿತ ಈ ಮಸೂದೆಗೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಈ ಮಸೂದೆಯನ್ನು ಮಂಡಿಸಿದರು.

ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ’ಈ ಮಸೂದೆ ಬೆಂಬಲಿಸುತ್ತೇವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಆತುರದಿಂದ ‌‌ನಿರ್ಧಾರ ಕೈಗೊಳ್ಳಲಾಗಿದೆ. ರಾಜಕೀಯವಾಗಿ ಪರಿಶಿಷ್ಟರಿಗೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ‘ ಎಂದರು.

ADVERTISEMENT

’ಈ ಮೀಸಲಾತಿ ಹೆಚ್ಚಳವನ್ನು ಷೆಡ್ಯೂಲ್‌–9ರ ವ್ಯಾಪ್ತಿಯಲ್ಲಿ ತರಲು ಏನು ತೊಂದರೆ ಇತ್ತು. ಮುಂದೆ ಎದುರಾಗುವ ಕಾನೂನು ತೊಡಕಗಳನ್ನು ಸರ್ಕಾರ ಏನು ಕ್ರಮಕೈಗೊಂಡಿದೆ‘ ಎಂದು ಪ್ರಶ್ನಿಸಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿ, ‘’ನಾವು ಪರಿಶಿಷ್ಟರ ಹಿತಾಸಕ್ತಿಗೆ ಬದ್ಧರಾಗಿದ್ದು, ಮುಂದೆ ಎದುರಾಗುವ ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧ‘ ಎಂದರು.

’ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಅಡಿ ನೇತೃತ್ವದ ಸಮಿತಿ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲಾಗಿದ್ದು, ಕೇಂದ್ರಕ್ಕೆ ಕಳುಹಿಸಲಾಗುವುದು. ಒಂದು ವೇಳೆ, ಮೀಸಲಾತಿ ಹೆಚ್ಚಳ ಯಾವುದೇ ಹಂತದಲ್ಲಿ ತಿರಸ್ಕೃತಗೊಂಡರೆ ವಿಧಾನಮಂಡಲದ ಅಧಿವೇಶನವನ್ನು ಕರೆದು ಉಭಯ ಸದನಗಳಲ್ಲಿ ಮತ್ತೊಮ್ಮೆ ನಿರ್ಣಯ ಕೈಗೊಳ್ಳಲಾಗುವುದು‘ ಎಂದರು.

’103ನೇ ತಿದ್ದುಪಡಿಯು ಮೀಸಲಾತಿ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗದ ವರದಿಗೆ ಸೀಮಿತವಾಗಿ ಮೀಸಲಾತಿ ಹೆಚ್ಚಿಸಲಾಗಿದೆ. ಯಾವುದೇ ತೊಡಕಗಳು ಎದುರಾಗದಂತೆ ನಿರಂತರವಾಗಿ ಸರ್ಕಾರ ಹೋರಾಟ ಮಾಡಲಿದೆ ಮತ್ತು ಪರಿಹಾರ ಕಂಡುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತೇವೆ‘ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.