ADVERTISEMENT

ಸಭಾಪತಿ ಚುನಾವಣೆ: ಬಸವರಾಜ ಹೊರಟ್ಟಿಗೆ ಮತ್ತೆ ಅವಕಾಶ?

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 21:06 IST
Last Updated 9 ಡಿಸೆಂಬರ್ 2022, 21:06 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಚುನಾವಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಡಿ.21ಕ್ಕೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ, ಬಿಜೆಪಿಯಲ್ಲಿ ಸಭಾಪತಿ ಸ್ಥಾನದ ಆಕಾಂಕ್ಷಿಗಳ ಚಟುವಟಿಕೆ ಬಿರುಸಾಗಿದೆ.

ಬಿಜೆಪಿ ಮೂಲಗಳ ಪ್ರಕಾರ, ಬಸವರಾಜ ಹೊರಟ್ಟಿ ಅವರನ್ನೇ ಸಭಾಪತಿ ಹುದ್ದೆಯ ಅಭ್ಯರ್ಥಿ
ಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ಹೊರಟ್ಟಿಯವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲೇ, ಸಭಾಪತಿ ಹುದ್ದೆಯನ್ನು ನೀಡುವ ಭರವಸೆ ನೀಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಅವರ ಜತೆಯೂ ಮಾತುಕತೆ ನಡೆಸಿದ್ದರು.

ಆದರೆ, ಪರಿಷತ್ತಿನಲ್ಲಿ ಬಿಜೆಪಿಯ ಕೆಲವು ಹಿರಿಯ ಸದಸ್ಯರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಆ ಪೈಕಿ ಹಂಗಾಮಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ ಮಾತ್ರ ಗಂಭೀರ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಪ್ರಯತ್ನ ನಡೆಸಿದ್ದ ಆಯನೂರು ಮಂಜುನಾಥ್‌, ವೈ.ಎ.ನಾರಾಯಣ ಸ್ವಾಮಿ ಅವರು ಈ ಬಾರಿ ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

‘ದೊಡ್ಡಬಳ್ಳಾಪುರದಲ್ಲಿ ನಡೆದ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲೇ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಅವರನ್ನೇ ಆಯ್ಕೆ ಮಾಡುವ ತೀರ್ಮಾನ ತೆಗೆದು ಕೊಳ್ಳಲಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪರಿಷತ್ತಿನಲ್ಲಿ ಅತ್ಯಂತ ಹಿರೀಕರಾದ ಹೊರಟ್ಟಿಯವರು ಸದನವನ್ನು ಸಮತೂಕದಿಂದ ಒಯ್ಯುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಆಡಳಿತ ಪಕ್ಷವಲ್ಲದೇ, ವಿರೋಧ ಪಕ್ಷದ ಸದಸ್ಯರೂ ಹೊರಟ್ಟಿ ಅವರ ಬಗ್ಗೆ ಗೌರವ ಹೊಂದಿದ್ದಾರೆ ಎಂಬ ವಿಷಯ ಪ್ರಸ್ತಾಪವಾಯಿತು. ಇನ್ನು ಕೆಲವರು ಅವರು ವಿರೋಧ ಪಕ್ಷಗಳಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ಸರ್ಕಾರ ಪರವಾಗಿ ನಿಲ್ಲುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಸಭಾಪತಿ ಕೇವಲ ಸರ್ಕಾರದ ಪರವಾಗಿ ಮಾತ್ರವಲ್ಲ, ವಿರೋಧ ಪಕ್ಷಗಳಿಗೂ ಅವಕಾಶ ನೀಡಬೇಕಾಗುತ್ತದೆ. ಆಗಲೇ ಸದನದ ಗೌರವ ಎತ್ತಿ ಹಿಡಿದಂತಾಗುತ್ತದೆ. ಆದ್ದರಿಂದ, ಹೊರಟ್ಟಿ ಅವರನ್ನು ಮಾಡುವುದೇ ಸೂಕ್ತ’ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.

‘ಬಿಜೆಪಿಯ ಹಿರಿಯ ಸದಸ್ಯ ಮತ್ತು ಕುರುಬ ಸಮುದಾಯದ ರಘುನಾಥರಾವ್ ಮಲ್ಕಾಪುರೆ ಅವರು, ತಾವೂ ಹಿರಿಯ ಸದಸ್ಯರಾಗಿದ್ದು ತಮಗೂ ಅವಕಾಶ ನೀಡಬೇಕು.ಕೆ.ಎಸ್‌.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮೂಲ ಬಿಜೆಪಿಯ ಕುರುಬ ಜನಾಂಗದ ಶಾಸಕರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಈಗ ಸಚಿವರಾಗಿರುವ ಬೈರತಿ ಬಸವರಾಜು ಮತ್ತು ಎಂ.ಟಿ.ಬಿ.ನಾಗರಾಜ್ ಅವರು ಕಾಂಗ್ರೆಸ್‌ನಿಂದ ವಲಸೆ ಬಂದವರು. ಹೀಗಾಗಿ ತಮಗೆ ಅವಕಾಶ ನೀಡಬೇಕು ಎಂಬ ವಾದ ಮುಂದಿಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.