ADVERTISEMENT

‘ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಶೀಘ್ರ ಮಂಜೂರು’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 20:04 IST
Last Updated 13 ಡಿಸೆಂಬರ್ 2018, 20:04 IST

ಬೆಳಗಾವಿ: ‘ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಕೋರಿ ಬಂದಿರುವ ಅರ್ಜಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ವಿದ್ಯಾರ್ಥಿವೇತನವನ್ನೂ ಮಂಜೂರು ಮಾಡುತ್ತೇವೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ವಿಧಾನಪರಿಷತ್ತಿಗೆ ತಿಳಿಸಿದರು.

‘ವಿದ್ಯಾರ್ಥಿವೇತನದಲ್ಲಿ ಹಿಂದುಳಿದ ಇಲಾಖೆ’ ಎಂಬ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿ ಬಿಜೆಪಿ ಸದಸ್ಯ ಅರುಣ್‌ ಶಹಾಪುರ ಅವರು ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಕೇಳಿದ್ದ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದರು.

ಇ–ಆಡಳಿತ ಇಲಾಖೆಯು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಘಟಕದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ್ದ ಸಮಗ್ರ ಹಾಗೂ ಏಕೀಕೃತ ವಿದ್ಯಾರ್ಥಿವೇತನ ವಿತರಣೆ ತಂತ್ರಾಂಶವನ್ನು ಮುಖ್ಯಮಂತ್ರಿ ಅವರು ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆ ಮಾಡಿದ್ದರು. ಇನ್ನು ವ್ಯವಸ್ಥೆ ಸುಲಲಿತ ಎಂದು ಮುಖ್ಯಮಂತ್ರಿ ಹಾಗೂ ಸಚಿವರು ಬಣ್ಣಿಸಿದ್ದರು. ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ತಂತ್ರಾಂಶದ ಲೋಪದಿಂದಾಗಿ ಇನ್ನೂ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯ ವಿಶೇಷ ವರದಿ ಬೆಳಕು ಚೆಲ್ಲಿತ್ತು.

ADVERTISEMENT

‘2018–19ನೇ ಸಾಲಿನ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನವನ್ನು ಹಿಂದಿನ ಸಾಲಿನಲ್ಲಿ ಸೇವೆ ನೀಡುತ್ತಿದ್ದ ಹೈದರಾಬಾದ್‌ನ ಸಿಜಿಜಿ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ವಿದ್ಯಾರ್ಥಿವೇತನ ಕೋರಿ 9.17 ಲಕ್ಷ ಅರ್ಜಿಗಳು ಬಂದಿದ್ದು, ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.