ADVERTISEMENT

ಶಾಸಕ ಬೈರತಿ ಬಸವರಾಜು ರಕ್ಷಣೆ ಆದೇಶ ತೆರವು ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 23:50 IST
Last Updated 25 ಸೆಪ್ಟೆಂಬರ್ 2025, 23:50 IST
ಬೈರತಿ ಬಸವರಾಜು
ಬೈರತಿ ಬಸವರಾಜು   

ಬೆಂಗಳೂರು: ‘ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಆರೋಪ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ಅವರನ್ನು ಬಂಧಿಸದಂತೆ ರಕ್ಷಣೆ ನೀಡಿರುವ ಆದೇಶ ತೆರವುಗೊಳಿಸಬೇಕು’ ಎಂದು ಕೋರಿ ರಾಜ್ಯ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌,
‘ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಹಲವು ಮಹತ್ವದ ಸಾಕ್ಷಗಳನ್ನು ಸಂಗ್ರಹಿಸಿದೆ. ಹಿಂದಿನ ವಿಚಾರಣೆಗಳಲ್ಲಿ ಬೈರತಿ ಬಸವರಾಜು ಸುಳ್ಳು ಮಾಹಿತಿ ನೀಡಿದ್ದಾರೆ. ಬೈರತಿ ಬಸವರಾಜು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕಿದೆ. ಆದ್ದರಿಂದ, ಅವರನ್ನು ಬಂಧಿಸಿದಂತೆ ಈ ಹಿಂದೆ ಹೊರಡಿಸಿರುವ ನಿರ್ಬಂಧದ ಆದೇಶ ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೈರತಿ ಬಸವರಾಜು ಪರ ಪದಾಂಕಿತ ಹಿರಿಯ ವಕೀಲ ಸಂದೇಶ್‌ ಜೆ. ಚೌಟ, ‘ಪೊಲೀಸರು ಕಳೆದ ಒಂದು ತಿಂಗಳಿನಿಂದ ವಿಚಾರಣೆಗೆ ಕರೆದಿಲ್ಲ. ಈ ಹಿಂದೆ ಪೊಲೀಸರು ಕರೆದಾಗಲೆಲ್ಲಾ ಅರ್ಜಿದಾರರು ವಿಚಾರಣೆಗೆ ಸಹಕರಿಸಿದ್ದಾರೆ. ಈಗ ಏಕಾಏಕಿ ಬಂಧನದ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ರಾಜಕೀಯ ದೃಷ್ಟಿಯಿಂದ ಕಿರುಕುಳ ನೀಡಬಾರದು. ಎಷ್ಟು ದಿನ ಕಸ್ಟಡಿಗೆ ಬೇಕು ಎಂಬುದನ್ನು ಕೋರ್ಟ್‌ಗೆ ತಿಳಿಸಿ’ ಎಂದು ಜಗದೀಶ್ ಅವರಿಗೆ ಸೂಚಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸುವಂತೆ ಬೈರತಿ ಬಸವರಾಜು ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿತು.

ಈ ಪ್ರಕರಣದಲ್ಲಿ ಬೈರತಿ ಬಸವರಾಜು ಐದನೇ ಆರೋಪಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.