ADVERTISEMENT

ರಾಜ್ಯಕ್ಕೆ 1,200 ಟನ್ ಆಮ್ಲಜನಕ; ಸುಪ್ರೀಂ ಆದೇಶ ಸ್ವಾಗತಿಸುತ್ತೇನೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2021, 10:19 IST
Last Updated 7 ಮೇ 2021, 10:19 IST
   

ಬೆಂಗಳೂರು:ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದವಿರುದ್ಧ ಕೇಂದ್ರ ಸರ್ಕಾರವುಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಸುಪ್ರೀಂ ಕೋರ್ಟ್, ಹೈಕೋರ್ಟ್‌ ಆದೇಶವನ್ನು‌ ಎತ್ತಿಹಿಡಿದಿದೆ. ಸುಪ್ರೀಂ ಆದೇಶವನ್ನು ನಾಡಿನ ನೊಂದ ಜನರೆಲ್ಲರ ಪರವಾಗಿ ನಾನು ಸ್ವಾಗತಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ʼನಮ್ಮ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೇಂದ್ರದ ಬಿಜೆಪಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟಿನ ಆದೇಶವನ್ನು ನಾಡಿನ ನೊಂದ ಜನರೆಲ್ಲರ ಪರವಾಗಿ ನಾನು ಸ್ವಾಗತಿಸುತ್ತೇನೆʼ ಎಂದಿದ್ದಾರೆ.

ಮುಂದುವರಿದು, ರಾಜ್ಯಕ್ಕೆ ನಿತ್ಯ 1600-1700 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ. ಆದರೆ, ಪ್ರಧಾನಿ ಮೋದಿ ಕಚೇರಿ ನಿಗದಿ ಮಾಡಿರುವುದು ಕೇವಲ 965 ಮೆಟ್ರಿಕ್ ಟನ್‌ ಮಾತ್ರ. ಇದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಪ್ರಾಣ ಕಳೆದುಕೊಳ್ಳಲಿದ್ದ ರಾಜ್ಯದ ಸಹಸ್ರಾರು ರೋಗಿಗಳ‌ ಪ್ರಾಣವನ್ನು ಸುಪ್ರೀಂ ಕೋರ್ಟ್ ಉಳಿಸಿದೆ ಎಂದು ತಿಳಿಸಿದ್ದಾರೆ.

ADVERTISEMENT

ʼಸುಪ್ರೀಂ ಕೋರ್ಟ್ ತಪರಾಕಿಯಿಂದ ಪ್ರಧಾನಿ ಮೋದಿ ಈಗಲಾದರೂ ಬುದ್ದಿ ಕಲಿಯಲಿ. ಜನರ ಪ್ರಾಣದ ಜೊತೆ ಚೆಲ್ಲಾಟವಾಡುವ‌ ಕ್ರೌರ್ಯವನ್ನು ನಿಲ್ಲಿಸಲಿ. ಕರ್ನಾಟಕಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಆಮ್ಲಜನಕವನ್ನು ತಕ್ಷಣ ಪೂರೈಸಲಿʼ ಎಂದು ಆಗ್ರಹಿಸಿದ್ದಾರೆ.

ʼರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್‌ ಅನ್ನು ಸಂಪೂರ್ಣ ಇಲ್ಲಿಯೇ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಹಾಗೂ ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನು 1500 ಮೆಟ್ರಿಕ್ ಟನ್‌ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯದ ಬಿಜೆಪಿ ಸಂಸದರುಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸುತ್ತೇನೆʼ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.