ADVERTISEMENT

ಬ್ಲ್ಯಾಕ್‌ ಫಂಗಸ್‌: ವರದಿ ಬಳಿಕ ತೀರ್ಮಾನ – ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 12 ಮೇ 2021, 16:06 IST
Last Updated 12 ಮೇ 2021, 16:06 IST
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌   

ಬೆಂಗಳೂರು: ‘ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಿಗೆ ಅತ್ಯಂತ ಅಪಾಯಕಾರಿ ಕಪ್ಪು ಶಿಲೀಂಧ್ರ ಸೋಂಕು (ಮ್ಯೂಕೋ ರ್ಮೈಕೋಸಿಸ್ ಅಥವಾ ಬ್ಲ್ಯಾಕ್‌ ಫಂಗಸ್) ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಎರಡು ದಿನಗಳ ಒಳಗೆ ವರದಿ ನೀಡುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಿದ್ದೇನೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕೆಲವು ಕಡೆಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಪತ್ತೆಯಾಗಿದೆ. ವರದಿ ಬಂದ ನಂತರ ಉನ್ನತಮಟ್ಟದಲ್ಲಿ ಚರ್ಚಿಸಿ, ಸರ್ಕಾರದ ನಿಲುವು ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ತೀರ್ಮಾನಿಸಲಾಗುವುದು’ ಎಂದರು.

‘ತಾಲ್ಲೂಕು ಆಸ್ಪತ್ರೆಗಳಲ್ಲಿರುವ ಎಲ್ಲ ಆರೂ ವೆಂಟಿಲೇಟರ್‌ಗಳು ಮೂರು ದಿನಗಳಲ್ಲಿ ಕಾರ್ಯನಿರ್ವಹಿಸು
ವಂತೆ ಮಾಡಲು ಕ್ರಮ ತೆಗೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅನಸ್ತೇಶಿಯಾ, ತಜ್ಞ ವೈದ್ಯರ ಕೊರತೆ ಇರುವ ಕಡೆ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ವ್ಯವಸ್ಥೆಗೆ ಸೂಚಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ 780 ತಜ್ಞ ವೈದ್ಯರ ಸಹಿತ 2,480 ವೈದ್ಯಕೀಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದರಿಂದ ತಾಲ್ಲೂಕುಗಳಲ್ಲಿ ವೈದ್ಯರ ಕೊರತೆ ನೀಗಲಿದೆ’ ಎಂದರು.

ADVERTISEMENT

‘ನಗರ ಪ್ರದೇಶಗಳಿಂದ ಹಳ್ಳಿಗಳ ಕಡೆಗೆ ಸೋಂಕು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಜಿಲ್ಲಾ, ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಹೆಚ್ಚಿಸಲಾಗುತ್ತಿದೆ’ ಎಂದೂ ಅವರು ಹೇಳಿದರು.

ಶೀಘ್ರ 780 ತಜ್ಞ ವೈದ್ಯರ ನೇಮಕ
ಚಿಂತಾಮಣಿ:
ರಾಜ್ಯದಲ್ಲಿ ವೈದ್ಯರ ಕೊರತೆ ತೀವ್ರವಾಗಿಲ್ಲ. ಶೀಘ್ರದಲ್ಲಿಯೇ 780 ತಜ್ಞ ವೈದ್ಯರನ್ನು ನೇಮಕದ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೈದ್ಯರನ್ನು ಎಲ್ಲ ತಾಲ್ಲೂಕುಗಳಿಗೂ ಆದ್ಯತೆ ಮೇರೆಗೆ ನಿಯೋಜಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.