ADVERTISEMENT

ಕೊರೊನಾ ಕೇಂದ್ರವಾಗಿ ಹಾಸ್ಟೆಲ್‌ ಬಳಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 17:51 IST
Last Updated 18 ಏಪ್ರಿಲ್ 2021, 17:51 IST

ಬೆಂಗಳೂರು:‘ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಲು ಮುಂದಾಗಿರುವುದರಿಂದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಭಾರಿ ಸಮಸ್ಯೆಯಾಗಲಿದೆ’ ಎಂದು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಕೆಲವು ವಿದ್ಯಾರ್ಥಿ ನಿಲಯಗಳನ್ನು ಕೊರೊನಾ ಆರೈಕೆ ಕೇಂದ್ರಗಳನ್ನಾಗಿ ಬಳಸಲು ಅನುವು ಮಾಡಿಕೊಡುವಂತೆ ಬಿಬಿಎಂಪಿಯು ಇಲಾಖೆಗೆ ಮನವಿ ಮಾಡಿದೆ. ಈಗಿನ ಪರಿಸ್ಥಿತಿಯಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ವಾಪಸ್ ಆಗುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಿದೆ’ ಎಂದು ವಿದ್ಯಾರ್ಥಿ ಕಾವೇರಿ ದಾಸ್ ತಿಳಿಸಿದರು.

‘ಕಳೆದ ವರ್ಷ ಕೊರೊನಾ ಮಿತಿ ಮೀರಿದ್ದ ಸಂದರ್ಭದಲ್ಲೂ ಇದೇ ರೀತಿ ಹಾಸ್ಟೆಲ್‌ಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಬಳಸಿಕೊಂಡಿದ್ದರು. ಸೂಚನೆಯಂತೆ ಹಾಸ್ಟೆಲ್‌ಗಳನ್ನು ಬಿಟ್ಟುಕೊಟ್ಟಿದ್ದೆವು. ಆದರೆ, ಹಿಂತಿರುಗಿದಾಗ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಹತ್ವದ ವಸ್ತುಗಳು ಹಾಗೂ ದಾಖಲೆಗಳು ಕಾಣೆಯಾಗಿದ್ದವು. ಕೋವಿಡ್ ಸೋಂಕಿತರು ಬಳಸಿದ್ದ ವಿದ್ಯಾರ್ಥಿ ನಿಲಯಗಳ ಸ್ಥಿತಿಯೂ ಬದಲಾಗಿರಲಿಲ್ಲ. ಸ್ಯಾನಿಟೈಸ್ ಕೂಡ ಮಾಡಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.