ADVERTISEMENT

Covid-19 Karnataka Update: ಬ್ರಿಟನ್ ವಲಸಿಗರು; ಸೋಂಕಿತರ ಸಂಖ್ಯೆ 40

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 17:36 IST
Last Updated 6 ಜನವರಿ 2021, 17:36 IST
ಕೋವಿಡ್‌ ವಾರ್ಡ್‌–ಸಾಂದರ್ಭಿಕ ಚಿತ್ರ
ಕೋವಿಡ್‌ ವಾರ್ಡ್‌–ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯಕ್ಕೆ ಬ್ರಿಟನ್‌ನಿಂದ ಬಂದವರಲ್ಲಿ ಮತ್ತೆ ಮೂವರು ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಅಲ್ಲಿಂದ ಮರಳಿದವರಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ಬ್ರಿಟನ್‌ನಿಂದ ಇಲ್ಲಿಗೆ ಬಂದು ಸೋಂಕಿತರಾದವರ ಸಂಪರ್ಕಿತರಲ್ಲಿ ಕೂಡ ವೈರಾಣು ಕಾಣಿಸಿಕೊಳ್ಳುತ್ತಿದೆ. ಅವರ ನೇರ ಸಂಪರ್ಕ ಹೊಂದಿದ್ದವರಲ್ಲಿ ಮತ್ತೆ 7 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದರಿಂದಾಗಿ ಕೋವಿಡ್ ಪೀಡಿತರಾದ ಸಂಪರ್ಕಿತರ ಸಂಖ್ಯೆ 25ಕ್ಕೆ ತಲುಪಿದೆ. ರೂಪಾಂತರ ವೈರಾಣು ಪತ್ತೆ ಸಂಬಂಧ ಇವರ ಮಾದರಿಗಳನ್ನು ಜಿನೋಮಿಕ್ ಸಿಕ್ವೆನ್ಸೀಸ್‌ ಪರೀಕ್ಷೆಗಾಗಿ ನಿಮ್ಹಾನ್ಸ್‌ ಪ್ರಯೋಗಾಯಲಯಕ್ಕೆ ಕಳುಹಿಸಲಾಗಿದೆ.

ರಾಜ್ಯದಲ್ಲಿ ಹೊಸದಾಗಿ 784 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.24 ಲಕ್ಷ ದಾಟಿದೆ. ಸೋಂಕಿತರಲ್ಲಿ ಮತ್ತೆ 6 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,124ಕ್ಕೆ ತಲುಪಿದೆ.

ADVERTISEMENT

ಗರಿಷ್ಠ ಪರೀಕ್ಷೆ: ಒಂದೇ ದಿನ 1.23 ಲಕ್ಷ ಆರ್‌ಟಿ–ಪಿಸಿಆರ್‌ ಸೇರಿದಂತೆ 1.34 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದು ಈವರೆಗೆ 24 ಗಂಟೆಗಳ ಅವಧಿಯಲ್ಲಿ ನಡೆಸಲಾದ ಗರಿಷ್ಠ ಪರೀಕ್ಷೆಗಳಾಗಿವೆ. ಈ ತಿಂಗಳು ಆರು ದಿನಗಳಲ್ಲಿ 5.92 ಲಕ್ಷ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೋವಿಡ್ ಪೀಡಿತರಲ್ಲಿ ಮತ್ತೆ 1,238 ಮಂದಿ ಗುಣಮುಖರಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 9.02 ಲಕ್ಷಕ್ಕೆ ತಲುಪಿದೆ. ಸೋಂಕಿತರಲ್ಲಿ ಸದ್ಯ 9,177 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 210 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ.

ಬೆಂಗಳೂರಿನಲ್ಲಿ ಮತ್ತೆ 437 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.90 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 22 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 52,640ಕ್ಕೆ ತಲುಪಿದೆ. ದಕ್ಷಿಣ ಕನ್ನಡದಲ್ಲಿ 42, ಚಿಕ್ಕಬಳ್ಳಾಪುರದಲ್ಲಿ 30, ಹಾಸನ ಹಾಗೂ ಕೋಲಾರದಲ್ಲಿ ತಲಾ 24 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 3, ತುಮಕೂರು, ಧಾರವಾಡ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.