ADVERTISEMENT

Covid-19 Karnataka Update: ಭಾನುವಾರ 330 ಮಂದಿಗೆ ಕೊರೊನಾ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 21:41 IST
Last Updated 12 ಡಿಸೆಂಬರ್ 2021, 21:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯದಲ್ಲಿ 330 ಮಂದಿ ಕೋವಿಡ್ ಪೀಡಿತರಾಗಿರುವುದು ಭಾನುವಾರ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,328ಕ್ಕೆ ಏರಿಕೆಯಾಗಿದೆ.

ಒಂದು ದಿನದ ಅವಧಿಯಲ್ಲಿ 1.18 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 21 ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿದ್ದು, ಸೋಂಕು ದೃಢ ಪ್ರಮಾಣ ಶೇ 0.27ರಷ್ಟಿದೆ. ನಾಲ್ಕು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 16 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ ಸೇರಿದಂತೆ 9 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ.

ಬೆಂಗಳೂರು ನಗರದಲ್ಲಿ 205 ಮಂದಿಕೋವಿಡ್ಪೀಡಿತರಾಗಿದ್ದಾರೆ. ‌ಕೊಡಗಿನಲ್ಲಿ 40, ದಕ್ಷಿಣ ಕನ್ನಡದಲ್ಲಿ 15, ಮೈಸೂರಿನಲ್ಲಿ 13, ಶಿವಮೊಗ್ಗದಲ್ಲಿ 11 ಪ್ರಕರಣಗಳುವರದಿಯಾಗಿವೆ.ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 10ಕ್ಕಿಂತ ಕಡಿಮೆ ಇವೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30 ಲಕ್ಷದ ಗಡಿ ದಾಟಿದೆ.

ADVERTISEMENT

ಸೋಂಕಿತರಲ್ಲಿ 304 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಸಂಖ್ಯೆ 29.54 ಲಕ್ಷ ದಾಟಿದೆ. ಬೆಂಗಳೂರಿನಲ್ಲಿ 5,602 ಸೋಂಕಿತರಿದ್ದಾರೆ.ಯಾದಗಿರಿ, ಗದಗ ಹಾಗೂ ರಾಯಚೂರಿನಲ್ಲಿ ಸಕ್ರಿಯ ಪ್ರಕರಣಗಳಿಲ್ಲ.ಬೀದರ್, ಹಾವೇರಿ ಸೇರಿದಂತೆ 6 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10ಕ್ಕಿಂತ ಕಡಿಮೆಯಿದೆ.

ಕೋವಿಡ್ಪೀಡಿತರಲ್ಲಿ ಬೆಂಗಳೂರಿನಲ್ಲಿ ಮೂವರು ಹಾಗೂ ಬೀದರ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಮರಣ ಪ್ರಕರಣ ಹೊಸದಾಗಿ ವರದಿಯಾಗಿಲ್ಲ. ಮರಣ ಪ್ರಮಾಣ ದರವು ಶೇ 1.21 ರಷ್ಟು ಇದೆ. ಈವರೆಗೆಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,261ಕ್ಕೆ ಏರಿಕೆಯಾಗಿದೆ.

51 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢ
ಬೆಂಗಳೂರು:
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಜವಾಹರ ನವೋದಯ ವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳಿಗೆ ಹಾಗೂ ಕೊಡಗು ಜಿಲ್ಲೆಯಲ್ಲಿ 47 ವಿದ್ಯಾರ್ಥಿಗಳಲ್ಲಿ ಕೋವಿಡ್‌ ದೃಢಪಟ್ಟಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ಶಾಲೆಯ 38 ವಿದ್ಯಾರ್ಥಿಗಳಿಗೆ ಕೋವಿಡ್ ದೃಢವಾಗಿದೆ. ಶಾಲೆಯ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. 210 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇನ್ನು 110 ವಿದ್ಯಾರ್ಥಿಗಳ ವರದಿ ಬರಬೇಕಿದೆ.

‘ಶಾಲೆಗೆ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಒಂದು ವಾರ ಶಾಲೆ ಬಂದ್‌ ಮಾಡಲು ಸೂಚಿಸಿದ್ದಾರೆ’ ಎಂದು ಮೊರಾರ್ಜಿ ದೇಸಾಯಿ ಶಾಲೆ ಶಿಕ್ಷಕರು ಮಾಹಿತಿ ನೀಡಿದರು.

ಮಡಿಕೇರಿಯಲ್ಲಿರುವ ಕೊಡಗು ವಿದ್ಯಾಲಯದ 9 ವಿದ್ಯಾರ್ಥಿಗಳಿಗೆ ಮತ್ತೆ ಕೋವಿಡ್‌ ದೃಢಪಟ್ಟಿದೆ. ಕಳೆದ ವಾರ ಇದೇ ಶಾಲೆಯ 11 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಉಳಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಒಂದೇ ದಿನ 15 ಪ್ರಕರಣಗಳು ಪತ್ತೆಯಾಗಿವೆ.

‘ಮೊರಾರ್ಜಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವಿದ್ಯಾರ್ಥಿಗಳನ್ನು ಸೋಮವಾರಪೇಟೆ, ಮಡಿಕೇರಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕಪಡುವ ಅಗತ್ಯ ಇಲ್ಲ’ ಎಂದು ಡಿಎಚ್‌ಒ ಡಾ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.