ADVERTISEMENT

ವಸತಿ ಶಾಲೆ, ಹಾಸ್ಟೆಲ್‌ಗಳಲ್ಲಿ ಕೋವಿಡ್ ಹೆಚ್ಚಳ: ಶಾಲೆ ಬಂದ್‌ ಅಧಿಕಾರ ಡಿ.ಸಿಗೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:31 IST
Last Updated 11 ಜನವರಿ 2022, 19:31 IST
ಬ್ರಹ್ಮಾವರದ ಜಿ.ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ೧೫ರಿಂದ ೧೮ವರ್ಷದ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದಲ್ಲಿ ಮಂಗಳವಾರ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಯಿತು.
ಬ್ರಹ್ಮಾವರದ ಜಿ.ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ೧೫ರಿಂದ ೧೮ವರ್ಷದ ವಿದ್ಯಾರ್ಥಿಗಳಿಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದಲ್ಲಿ ಮಂಗಳವಾರ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಯಿತು.   

ಬೆಂಗಳೂರು: ರಾಜ್ಯದಲ್ಲಿರುವ ಶಾಲೆ, ವಸತಿ ಶಾಲೆಗಳು ಮತ್ತು ಹಾಸ್ಟೆಲ್‌ ಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದಲ್ಲಿ ಅವುಗಳನ್ನು ಮುಚ್ಚುವ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಹಿರಿಯ ಅಧಿಕಾರಿಗಳ ವರ್ಚುವಲ್‌ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಜತೆ ಸಮಾಲೋಚನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳಬಹುದು ಎಂದೂ ಅವರು ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಕೋವಿಡ್‌ ಪರೀಕ್ಷೆಗಳ ಪ್ರಮಾಣವನ್ನು ದಿನಕ್ಕೆ 1.50 ಲಕ್ಷಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಇತರ ಜಿಲ್ಲೆಗಳಲ್ಲೂ ಪರೀಕ್ಷೆಯ ಪ್ರಮಾಣ ಹೆಚ್ಚಿಸಲಾಗುವುದು ಎಂದರು.

ಮಕ್ಕಳಲ್ಲಿ ಕೋವಿಡ್‌ ಹೆಚ್ಚುತ್ತಿರುವ ಕಾರಣ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್‌, ಐಸಿಯುಗಳನ್ನು ಮೀಸಲಿರಿಸಬೇಕು. ಕೋವಿಡ್‌ ಸೋಂಕಿತ ಮಕ್ಕಳಿಗೆ ಅಗತ್ಯವಿರುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು ಎಂದು ಜ್ಞಾನೇಂದ್ರ ಹೇಳಿದರು.

ಅಲ್ಲದೇ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವಂತೆಯೂ ಮುಖ್ಯಮಂತ್ರಿಯವರು ಸಭೆಯಲ್ಲಿ ಸಲಹೆ ನೀಡಿದರು.

ಕೋವಿಡ್‌ನಿಂದ ಮನೆಗಳಲ್ಲಿ ಪ್ರತ್ಯೇಕವಾಸದಲ್ಲಿರುವವರ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು. ಇವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡಬೇಕು ಮತ್ತು ಸೂಕ್ತ ಔಷಧಿಗಳ ಕಿಟ್‌ಗಳನ್ನು ಒದಗಿಸಬೇಕು. ಪರೀಕ್ಷಾ ವರದಿ ಬಂದ ಕೂಡಲೇ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂದು ನಿರ್ಧರಿಸುವ ಟ್ರಯಾಜಿಂಗ್‌ ವ್ಯವಸ್ಥೆ ಬಲಪಡಿಸಲು ಸೂಚಿಸಲಾಯಿತು ಎಂದರು.

‘ಕೋವಿಡ್‌ ಮುಂಜಾಗ್ರತಾ ಕ್ರಮವಾಗಿ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಈ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದಾಗಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಈ ತಿಂಗಳ ಕೊನೆಯವರೆಗೂ ಜಾರಿಯಲ್ಲಿರುವ ಸಾಧ್ಯತೆ ಹೆಚ್ಚಿದೆ’ ಎಂದು ಮೂಲಗಳು ಹೇಳಿವೆ.

ನಿರ್ಬಂಧ ಪರಿಷ್ಕರಣೆ:

l ಎಲ್ಲ ರೀತಿಯ ಧರಣಿ, ಪ್ರತಿಭಟನೆ ಮತ್ತು ರ್‍ಯಾಲಿಗಳನ್ನು ನಿರ್ಬಂಧಿಸಲಾಗಿದೆ. ಮದುವೆಗಳಿಗೆ ಒಳಾಂಗಣ 100 ಮತ್ತು ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ

l ಮೆಟ್ರೊ ಸೇರಿದಂತೆ ಎಲ್ಲ ರೀತಿಯ ಸಾರ್ಜನಿಕರ ಸಾರಿಗೆಗಳಲ್ಲಿ ಆಸನ ಸಾಮರ್ಥ್ಯದಷ್ಟೇ ಪ್ರಯಾಣಕ್ಕೆ ಅವಕಾಶ.

l ಬಿಬಿಎಂಪಿ ವಿಶೇಷ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಬಹುದು.

l ಬಿಬಿಎಂಪಿ ವಿಶೇಷ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಇದಕ್ಕಾಗಿ ಸಿಆರ್‌ಪಿಸಿಯ 144 ನೇ ಸೆಕ್ಷನ್ ವಿಧಿಸಬಹುದು. ಇದನ್ನು ಯಾರಾದರೂ ಉಲ್ಲಂಘಿಸಿದರೆ, ಕಾನೂನು ಪ್ರಕಾರ ಕ್ರಮ ಜರುಗಿಸಬಹುದು.

ಜ.11ರ ಕೋವಿಡ್ ಮಾಹಿತಿ

ರಾಜ್ಯದ ಹೊಸ ಪ್ರಕರಣ: 14,473

ಬೆಂಗಳೂರಿನ ಹೊಸ ಪ್ರಕರಣ: 10,800

ರಾಜ್ಯದ ಸೋಂಕು ದೃಢ ಪ್ರಮಾಣ: ಶೇ 10.30

ಸಕ್ರಿಯ ಪ್ರಕರಣ: 73,260

ದೃಢಪಟ್ಟ ಮರಣ ಪ್ರಕರಣ: 05

ನಡೆಸಲಾದ ಪರೀಕ್ಷೆ: 1,40,452

ವೈಕುಂಠ ಏಕಾದಶಿ, ಸಂಕ್ರಾಂತಿಗೆ ಕಟ್ಟುನಿಟ್ಟು

ವೈಕುಂಠ ಏಕಾದಶಿ ಮತ್ತು ಸಂಕ್ರಾಂತಿ ಹಬ್ಬಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗಿದ್ದು, ಇವೆರಡೂ ಹಬ್ಬಗಳ ಪ್ರಯುಕ್ತ ಶಾಸ್ತ್ರ– ಸಂಪ್ರದಾಯಗಳ ಪ್ರಕಾರ, ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯ ನಡೆಸಲು ಅನುಮತಿ ನೀಡಲಾಗಿದೆ.

ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್‌–19 ಲಸಿಕೆ ಎರಡು ಡೋಸ್‌ಗಳನ್ನು ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ನೀಡಬೇಕು. ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಹಬ್ಬಗಳ ಆಚರಣೆಯ ಸಲುವಾಗಿ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆಯೂ ಇಲ್ಲ. ಬಿಬಿಎಂಪಿ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್‌ ಪರಿಸ್ಥಿತಿ ಅವಲೋಕಿಸಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಹುದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.