ADVERTISEMENT

ಒಳನೋಟ: ಮಕ್ಕಳನ್ನು ಕಾಡುತ್ತಿದೆ ಅನಾಥಪ್ರಜ್ಞೆ

ಸರ್ಕಾರದ ನೆರವು ಕನ್ನಡಿಯೊಳಗಿನ ಗಂಟು l ಅಪ್ಪ, ಅಮ್ಮನ ನೆನಪಿನಿಂದ ಹೊರಬಾರದ ಪುಟಾಣಿಗಳು

ಬಸವರಾಜ ಹವಾಲ್ದಾರ
Published 16 ಏಪ್ರಿಲ್ 2022, 21:22 IST
Last Updated 16 ಏಪ್ರಿಲ್ 2022, 21:22 IST
   

ಹುಬ್ಬಳ್ಳಿ: ‘ಗಂಡ ಹಾಗೂ ಮೈದುನ ಇಬ್ಬರೂ ಕೋವಿಡ್‌ನಿಂದ ತೀರಿಕೊಂಡಿದ್ದಾರೆ. ನಮಗೆ ನಾಲ್ಕು ಹಾಗೂ ಮೈದುನನಿಗೆ ಇಬ್ಬರು ಮಕ್ಕಳಿದ್ದಾರೆ. ಟೈಲರಿಂಗ್‌ನಿಂದ ಬರುವ ಸಣ್ಣ ಆದಾಯದ ಮೇಲೆಯೇ ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ. ಮಕ್ಕಳಿಗೆ ತಂದೆಯ ಅಗಲುವಿಕೆಯ ನೋವು ಕಾಡುತ್ತಲೇ ಇದೆ.....’

ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡ ಬೆಳಗಾವಿ ಜಿಲ್ಲೆಯ ರಾಯಭಾಗದ ತ್ರಿವೇಣಿ ಮೇತ್ರಿ ಅವರು ಸಂಕಷ್ಟಗಳ ಸರಮಾಲೆಯನ್ನೇ ಬಿಚ್ಚಿಟ್ಟರು.

‘ಎಲ್ಲ ಮಕ್ಕಳೂ 6 ರಿಂದ 14 ವರ್ಷದವರಿದ್ದಾರೆ. ನಾವಿಬ್ಬರೇ ಮಹಿಳೆಯರು ಎಲ್ಲವನ್ನೂ ನೋಡಿಕೊಳ್ಳಬೇಕು. ಹೊಲವಿಲ್ಲ. ಬಾಡಿಗೆ ಮನೆಯಲ್ಲಿದ್ದೇವೆ. ಕುಟುಂಬದ ಎಲ್ಲ ವೆಚ್ಚ ಸರಿದೂಗಿಸುವುದೇ ಸವಾಲಾಗಿದೆ’ ಎಂದಾಗ ಅವರ ಮೊಗದಲ್ಲಿ ಚಿಂತೆಯ ಗೆರೆಗಳು ಮೂಡಿದ್ದವು.

ADVERTISEMENT

‘ಗಂಡ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಮೂರು ತಿಂಗಳಷ್ಟೇ ಆಗಿತ್ತು. ಹಾಗಾಗಿ, ಕಂಪನಿಯಿಂದ ಯಾವುದೇ ನೆರವು ಸಿಗಲಿಲ್ಲ. ಸರ್ಕಾರದಿಂದ ಬರುವ ನೆರವಿಗಾಗಿ ಅಧಿಕಾರಿಗಳಿಗೆ ದಾಖಲೆ ಸಲ್ಲಿಸಿದ್ದೇನೆ. ಇನ್ನೂ ಆರ್ಥಿಕ ನೆರವು ಸಿಕ್ಕಿಲ್ಲ. ಗಂಡನ ಅಗಲುವಿಕೆಯ ಜತೆಗೆ ಆರ್ಥಿಕ ಹೊರೆ, ಮಕ್ಕಳ ಭವಿಷ್ಯದ ಚಿಂತೆ ನಮ್ಮನ್ನು ಕಾಡುತ್ತಿದೆ’ ಎನ್ನುತ್ತಾ ಅವರು ಕಣ್ಣೀರಾದರು.

‘ತುಮಕೂರಿನಲ್ಲಿ ಎಲೆಕ್ಟ್ರಿಕಲ್‌ ಗುತ್ತಿಗೆದಾರರಾಗಿದ್ದ ಮಾವ ಮತ್ತು ಅಕ್ಕನಿಗೆ ಕೋವಿಡ್‌ ಆಗಿತ್ತು. ಅಕ್ಕ, ಮಾವ ಹಾಗೂ ಅವರ ಇಬ್ಬರು ಮಕ್ಕಳನ್ನು ನಮ್ಮೂರು ನರಗುಂದಕ್ಕೆ ಕರೆದುಕೊಂಡು ಬಂದಿದ್ದೆ. ಮೊದಲು ಅಕ್ಕ ತೀರಿಕೊಂಡರು. ನಂತರ ಮಾವ ಅಕ್ಕನ ಹಾದಿ ಹಿಡಿದರು. ಅವರ ಮಕ್ಕಳಿಬ್ಬರ ಜೀವನ ನಮ್ಮೊಂದಿಗೆ ಹೇಗೋ ನಡೆದಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಕ್ಕಳ ಸೋದರ ಮಾವ ‘ಪ್ರಜಾವಾಣಿ’ಗೆ ತಿಳಿಸಿದರು

‘ಸರ್ಕಾರದಿಂದ ಮಕ್ಕಳ ಖಾತೆಗೆ ನೆರವಿನ ಹಣ ಜಮಾ ಆಗಿದೆ. ಆದರೆ, ಅದನ್ನು ಅವರಿಗೆ 18 ವರ್ಷಗಳಾಗುವವರೆಗೂ ಅವರ ಖಾತೆಯಿಂದ ತೆಗೆಯುವಂತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನನ್ನ ಆದಾಯದಲ್ಲಿಯೇ ಅವರನ್ನೂ ಸಾಕುತ್ತಿದ್ದೇನೆ. ಸರ್ಕಾರ ನನಗೇನೂ ನೆರವು ನೀಡುವುದು ಬೇಡ. ಆದರೆ, ಮಕ್ಕಳಿಗೆ ಅವಶ್ಯವಿರುವ ನೆರವು ನೀಡಲಿ. ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಲಿ’ ಎನ್ನುತ್ತಾರೆ ಅವರು.

ಖಿನ್ನತೆಗೆ ಜಾರುತ್ತಿರುವ ಅನಾಥ ಮಕ್ಕಳು: ‘ತಂದೆ–ತಾಯಿಯನ್ನು ಕಳೆದುಕೊಂಡಿರುವ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಅಘಾತವಾಗುತ್ತದೆ. ಅದರಲ್ಲೂ ಪ್ರೀತಿಪಾತ್ರರಾದ ತಂದೆ, ತಾಯಿ ತೀರಿಕೊಂಡಾಗ ಉಂಟಾಗುವ ಅಘಾತ ಶಾಶ್ವತವಾಗಿರುತ್ತದೆ. ಇದರಿಂದಾಗಿ ಅವರು ಆತಂಕ ಎದುರಿಸುತ್ತಾರೆ. ಖಿನ್ನತೆಗೆ ಒಳಗಾಗುತ್ತಾರೆ. ಅಂತಹ ಹಲವಾರು ಪ್ರಕರಣಗಳಲ್ಲಿ ಚಿಕಿತ್ಸೆ ನೀಡಿದ್ದೇನೆ’ ಎನ್ನುತ್ತಾರೆ ಮಾನಸಿಕ ರೋಗ ತಜ್ಞ ಡಾ.ಆನಂದ ಪಾಂಡುರಂಗಿ.

‘ಅಪ್ಪ–ಅಮ್ಮನ ನೆನಪಿನಿಂದ ಹೊರಬಾರದ ಮಕ್ಕಳು ಸಹಜವಾಗಿ ಒಂಟಿಯಾಗಿ ಮಂಕಾಗಿ ಒಂದೆಡೆ ಕೂಡುತ್ತಾರೆ. ಅವರ ಊರು, ಶಾಲೆ ಎರಡೂ ಬದಲಾದ ಕಾರಣ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕು. ಹಳೆಯ ಶಾಲೆ, ಮನೆ, ಸ್ನೇಹಿತರ ನೆನಪು ಅವರನ್ನು ಕಾಡುವುದು ಸಹಜ’ ಎಂದು ಮಕ್ಕಳ ಮನಸ್ಸಿನಲ್ಲಿ ನಡೆಯುವ ತಳಮಳಗಳನ್ನು ಬಿಚ್ಚಿಟ್ಟರು.

ಹಾಗಾಗಿ ಮಕ್ಕಳು ಪದೇ ಪದೇ ಸಣ್ಣ ವಿಷಯಗಳಿಗೂ ಸಿಟ್ಟು ಮಾಡಿಕೊಳ್ಳುತ್ತಾರೆ. ಅನವಶ್ಯಕವಾಗಿ ಏಕಾಏಕಿ ಅಳುತ್ತಾರೆ. ಅಂತಹವರನ್ನು ನಿರ್ಲಕ್ಷಿಸದೆ ಆಪ್ತ ಸಮಾಲೋಚನೆಗೆ ಒಳಪಡಿಸಬೇಕು. ತಜ್ಞರು ನೀಡುವ ಸಲಹೆಗಳನ್ನು ಮನೆಯಲ್ಲಿರುವವರು ತಪ್ಪದೇ ಪಾಲಿಸಬೇಕು. ಅವರಲ್ಲಿ ಆತ್ಮವಿಶ್ವಾಸ ತುಂಬುವಂತಹ ವಾತಾವರಣ ನಿರ್ಮಿಸಬೇಕು ಎನ್ನುವುದು ಸಂತ್ರಸ್ತ ಮಕ್ಕಳ ಪೋಷಕರಿಗೆ ವೈದ್ಯರು ನೀಡುವ ಸಲಹೆ.

ಅನಾಥ ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಅವರಲ್ಲಿ ಅನಾಥಪ್ರಜ್ಞೆ ಜಾಗೃತವಾಗುತ್ತದೆ. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಕೀಳರಿಮೆ ಬೆಳೆಯುತ್ತದೆ. ಅವರನ್ನೂ ಎಲ್ಲರಂತೆ ಕಾಣಬೇಕು. ಆಗ ಅವರು ಮುಖ್ಯವಾಹಿನಿಗೆ ಸೇರುತ್ತಾರೆ ಎನ್ನುತ್ತಾರೆ ಡಾ.ಪಾಂಡುರಂಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.