ADVERTISEMENT

6ರಿಂದ 8: ಫೆ.22ರಿಂದ ಪೂರ್ಣ ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 20:26 IST
Last Updated 21 ಫೆಬ್ರುವರಿ 2021, 20:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ 6 ರಿಂದ 8 ನೇ ತರಗತಿಗಳು ಸೋಮವಾರದಿಂದ (ಫೆ.22) ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಳ್ಳಲಿವೆ.

ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿ ಭಾಗಗಳಿಗೆ ಹೊಂದಿಕೊಂಡಿರುವ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಪ್ರತಿ ದಿನ ಪೂರ್ಣಾವಧಿ ತರಗತಿಗಳು ನಡೆಯಲಿವೆ. ಈ ಎರಡೂ ಕಡೆ 8 ನೇ ತರಗತಿ ಪೂರ್ಣಾವಧಿ ನಡೆಯಲಿದೆ. ಆದರೆ, 6 ಮತ್ತು 7 ನೇ ತರಗತಿಗಳಿಗೆ ವಿದ್ಯಾಗಮ ಮುಂದುವರಿಯಲಿದೆ.

ಶಾಲಾ– ಕಾಲೇಜುಗಳಿಗೆ ಈಗಾಗಲೇ ಹೊರಡಿಸಿರುವ ಕೋವಿಡ್‌ ಮಾರ್ಗಸೂಚಿಯನ್ನು ಇಲ್ಲೂ ಪಾಲಿಸಬೇಕಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿದೆ. ತರಗತಿಗಳ ವೇಳಾಪಟ್ಟಿಯನ್ನೂ ಈಗಾಗಲೇ ಹೊರಡಿಸಲಾಗಿದೆ.

ADVERTISEMENT

ಊಟ ತರಬೇಕು

ವಿದ್ಯಾರ್ಥಿಗಳು ಮನೆಯಿಂದಲೇ ಊಟ, ಉಪಾಹಾರ ತರಲು ಸೂಚನೆ ನೀಡಬೇಕು ಎಂದೂ ಇಲಾಖೆಯು ಅಧಿಕಾರಿಗಳಿಗೆ ಹೇಳಿದೆ.

ಹಾಜರಾತಿ ಕಡ್ಡಾಯವಲ್ಲ

ತರಗತಿಗೆ ವಿದ್ಯಾರ್ಥಿಗಳು ಬರಲೇಬೇಕೆಂದು ಕಡ್ಡಾಯ ಮಾಡಿಲ್ಲ. ನೇರ ತರಗತಿಗೆ ಅಥವಾ ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು. ತರಗತಿಗೆ ಬರಲು ಒಪ್ಪದ ವಿದ್ಯಾರ್ಥಿಗಳು ಈಗಿನಂತೆ ಆನ್‌ಲೈನ್‌ ತರಗತಿಗೂ ಹಾಜರಾಗಬಹುದು.

ಆಯ್ದ ಶಾಲೆಗಳು ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ರ‍್ಯಾಂಡಮ್‌ ಆಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.