ADVERTISEMENT

ಜಿಲ್ಲೆಗಳಲ್ಲೂ ಹೆಚ್ಚುತ್ತಿದೆ ಕೋವಿಡ್‌: ಒಂದೇ ದಿನ 32,793 ಹೊಸ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2022, 17:58 IST
Last Updated 15 ಜನವರಿ 2022, 17:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಕೋವಿಡ್‌ನ ಹೊಸ ಪ್ರಕರಣಗಳು ಏರಿಕೆ ಕಾಣುತ್ತಿವೆ. ಈವರೆಗೆ ಬೆಂಗಳೂರಿನಲ್ಲಿ ಮಾತ್ರ ವೇಗವಾಗಿ ಏರಿಕೆಯಾಗುತ್ತಿತ್ತು ರಾಜ್ಯದಲ್ಲಿ ಶನಿವಾರ 32,793 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ಎರಡು ವಾರ ವರದಿಯಾದ ಹೊಸ ಪ್ರಕರಣಗಳಲ್ಲಿ ಶೇ 75 ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ದೃಢಪಟ್ಟಿದ್ದವು. ಆ ಪ್ರಮಾಣ ಈಗ ಶೇ 68ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿಒಂದು ದಿನದಲ್ಲಿ 2.18 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣಶೇ 15 ರಷ್ಟು ವರದಿಯಾಗಿದೆ.

ಈ ತಿಂಗಳು 15 ದಿನಗಳಲ್ಲಿ 1,78,694 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 31.86 ಲಕ್ಷಕ್ಕೆ ಏರಿಕೆಯಾಗಿದೆ.

ADVERTISEMENT

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 22,284ಕ್ಕೆ ಏರಿಕೆಯಾಗಿದೆ. 23 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿಯಲ್ಲಿದೆ. ತುಮಕೂರಿನಲ್ಲಿ 1,326, ಹಾಸನದಲ್ಲಿ 968, ದಕ್ಷಿಣ ಕನ್ನಡದಲ್ಲಿ 792, ಮೈಸೂರಿನಲ್ಲಿ 729, ಮಂಡ್ಯದಲ್ಲಿ 718, ಧಾರವಾಡದಲ್ಲಿ 648, ಉಡುಪಿಯಲ್ಲಿ 607 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 503 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500ಕ್ಕಿಂತ ಕಡಿಮೆ ಇವೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1.69 ಲಕ್ಷ ದಾಟಿದೆ. ಸೋಂಕಿತರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.02 ರಷ್ಟು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.