ADVERTISEMENT

ಶಾಲೆ ತಕ್ಷಣ ಆರಂಭಿಸಿ: ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಆಗ್ರಹ

ಸರ್ಕಾರ ಅನುಮತಿ ನೀಡದೇ ಇದ್ದರೆ ಇನ್ನೊಂದು ವಾರದಲ್ಲಿ ತರಗತಿ ಆರಂಭಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 20:00 IST
Last Updated 1 ಆಗಸ್ಟ್ 2021, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ರಾಜ್ಯ ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಕೂಡಲೇ ಆರಂಭಿಸಬೇಕು. ಶಾಲೆ ಆರಂಭಿಸಲು ಸರ್ಕಾರ ಅನುಮತಿ ನೀಡದೇ ಇದ್ದರೆ ಇನ್ನೊಂದು ವಾರದಲ್ಲಿ ತರಗತಿ ಆರಂಭಿಸಲಾಗುವುದು’ ಎಂದು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ ಕರ್ನಾಟಕ) ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಮತ್ತು ಹಾಲನೂರ್‌ ಎಸ್‌. ಲೇಪಾಕ್ಷ್‌, ‘ಶಾಲೆಗಳನ್ನು ಆರಂಭಿಸುವಂತೆ ನಾವು ಮಾಡಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಶಾಲೆಗಳನ್ನು ಯಾವುದೇ ವಿಳಂಬ ಮಾಡದೆ ಆರಂಭಿಸುವಂತೆ ನಾವು ಈಗಾಗಲೇ ಬೇಡಿಕೆ ಇಟ್ಟಿದ್ದೇವೆ’ ಎಂದರು.

‘ಐಸಿಎಂಆರ್‌, ರಾಜ್ಯ ಸರ್ಕಾರ ರಚಿಸಿದ್ದ ಕಾರ್ಯಪಡೆ ಮತ್ತು ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಾಲೆಗಳನ್ನು ಆರಂಭಿಸುವಂತೆ ಹೇಳಿದೆ. ಶಾಲೆ ಆರಂಭಿಸಲು ಜುಲೈ 30ರ ಗಡುವು ನೀಡಿ 10 ದಿನಗಳ ಮೊದಲೇ ಸರ್ಕಾರ ಮತ್ತು ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಶಾಲೆ ಆರಂಭಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಹೊಸ ಮುಖ್ಯಮಂತ್ರಿಗೆ ಗೌರವ ಕೊಟ್ಟು, ಮತ್ತಷ್ಟು ಕಾಲಾವಕಾಶ ಕೊಡಲು ನಿರ್ಧರಿಸಿದ್ದೇವೆ’ ಎಂದುಲೇಪಾಕ್ಷ್‌ ಹೇಳಿದರು.

ADVERTISEMENT

‘ರಾಜ್ಯದಲ್ಲಿ ಕೊರೊನಾ ಇಳಿಕೆ ಆಗುತ್ತಿದ್ದಂತೆ, ಶಾಲೆಗಳನ್ನು ಆರಂಭಿಸಲು ಹಿಂದಿನ‌ ಶಿಕ್ಷಣ ಸಚಿವರಿಗೆ ಹಲವು ಬಾರಿ ಮನವಿ ಮಾಡಿದ್ದೆವು. ಜೂನ್ ತಿಂಗಳಿನಲ್ಲಿಯೇ ಶಾಲೆ ಆರಂಭಿಸಿದ್ದರೆ ಕನಿಷ್ಠ 50 ಬೋಧಕ ದಿನಗಳು ಸಿಗುತ್ತಿತ್ತು. ಸೋಂಕು ಹೆಚ್ಚಾದರೆ ಆನ್‌ಲೈನ್ ಪಾಠ ಮುಂದುವರಿಸುವಂತೆ ಸೂಚಿಸಿದ್ದೆವು. ಆದರೆ, ಸಚಿವರು ಒಪ್ಪಿಗೆ ನೀಡಲಿಲ್ಲ’ ಎಂದು ಲೋಕೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಶಾಲೆಗಳ ವಸ್ತುಸ್ಥಿತಿ ಪರಿಗಣಿಸಿ ಯಾವುದೇ ಹೊಸ ನಿಯಮ ವಿಧಿಸದೆ ಮತ್ತು ಶುಲ್ಕ ಇಲ್ಲದೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ಸಾಮಾನ್ಯ ಕಡತದೊಂದಿಗೆ ಅನುಮತಿ ನೀಡಬೇಕು. 2019–20ನೇ ಸಾಲಿನ ಆರ್‌ಟಿಇ ಹಣ ಸರ್ಕಾರ ಬಿಡುಗಡೆ ಮಾಡಿದ್ದರೂ ಶಾಲೆಗಳ ಖಾತೆಗೆ ಜಮೆ ಆಗಿಲ್ಲ. ಖಾತೆಗೆ ಹಣ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು. 2020–21ನೇ ಸಾಲಿನ ಆರ್‌ಟಿಇ ಹಣ ಬಿಡುಗಡೆ
ಮಾಡಬೇಕು. ಖಾಸಗಿ ಶಾಲೆಗಳ ಶಿಕ್ಷಕರಿಗೆ ಸರ್ಕಾರ ಘೋಷಿಸಿರುವ ₹ 5,000 ಪ್ಯಾಕೇಜ್‌ ಕೂಡಲೇ ಖಾತೆಗೆ ಜಮೆ ಮಾಡಬೇಕು’ ಎಂದೂ ರುಪ್ಸಾ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.